ದೇಶವನ್ನೇ ಬೆಚ್ಚಿ ಬೀಳಿಸಿದ ಎನ್ ಆರ್ ಐ ಉದ್ಯಮಿ ಉಡುಪಿ ಯ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೊಲೆ ನಡೆದು 5 ವರ್ಷಗಳ ಬಳಿಕ ಇದೀಗ ಮೂವರು ಆರೋಪಿಗಳಿಗೆ ಉಡುಪಿ ಸೆಶನ್ಸ್ ನ್ಯಾಯಾಲಯ ಜೀವಿತಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2016 ರ ಜುಲೈ 28 ರಂದು ಭಾಸ್ಕರ್ ಶೆಟ್ಟಿ ಅವರನ್ನು ಕೊಂದು ಹೋಮ ಕುಂಡ ದಲ್ಲಿ ಸುಟ್ಟ ಪ್ರಮುಖ ಆರೋಪಿಗಳಾದ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ ಶೆಟ್ಟಿ, ಮಗ ನವನೀತ್ ಶೆಟ್ಟಿ ಹಾಗೂ ನಿರಂಜನ್ ಭಟ್ ಗೆ ಉಡುಪಿ ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಸುಭ್ರಹ್ಮಣ್ಯ ಜೆ. ಎಂ ಅವರು ಈ ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಈ ಪ್ರಕರಣವನ್ನು ಸಾಂದರ್ಭಿಕ ಸಾಕ್ಷಿಗಳ ನೆಲೆಯಲ್ಲಿ ತನಿಖೆ ಆರಂಭಿಸಿದ ಅಧಿಕಾರಿ ಗಳು, ಹೊಳೆಯಲ್ಲಿ ದೊರೆತ ಭಾಸ್ಕರ್ ಶೆಟ್ಟಿ ಅವರ ಮೂಳೆಗಳನ್ನು ಪರೀಕ್ಷೆ ನಡೆಸಿದಾಗ ಆ ಮೂಳೆಗಳು ಭಾಸ್ಕರ್ ಶೆಟ್ಟಿಯವರ ತಾಯಿ ಹಾಗೂ ತಮ್ಮನ ಡಿಎನ್ ಎ ಯೊಂದಿದೆ ಮ್ಯಾಚ್ ಆಗಿತ್ತು. ಈ ಹಿನ್ನೆಲೆಯಲ್ಲಿ ಹಾಗೂ ಅನೇಕ ಸಾಂದರ್ಭಿಕ ಸಾಕ್ಷಿಗಳನ್ನು ಪರಿಗಣಿಸಿ ಆರೋಪಿಗಳ ಆರೋಪ ಸಾಬೀತಾದ ಹಿನ್ನೆಲೆ ಈ ಮೂವರು ಆರೋಪಿಗಳಿಗೆ ಸೆಶನ್ಸ್ ನ್ಯಾಯಾಲಯ ತೀರ್ಪು ನೀಡಿ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.
ಈ ಬಗ್ಗೆ ಪ್ರಕರಣದ ವಿಚಾರಣೆಗೆ ಸರಕಾರ ನೇಮಿಸಿದ ವಿಶೇಷ ಅಭಿಯೋಜಕ ಎಂ. ಶಾಂತಾರಾಮ್ ಶೆಟ್ಟಿ ಅವರು ಮಾತನಾಡಿ, ಪ್ರಕರಣ ಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳ ಪೈಕಿ ರಾಜೇಶ್ವರಿ ಶೆಟ್ಟಿ, ಮಗ ನವನೀತ್ ಶೆಟ್ಟಿ ಹಾಗೂ ನಿರಂಜನ್ ಭಟ್ ಮೇಲಿನ ಆರೋಪ ಸಾಬೀತಾದ ಹಿನ್ನೆಲೆ ಉಡುಪಿ ಸೆಶನ್ಸ್ ನ್ಯಾಯಾಲಯ ಆರೋಪಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿ ಅಂದಿನ ಮಣಿಪಾಲ ಠಾಣೆಯ ಇನ್ಸ್ ಪೆಕ್ಟರ್ ಆಗಿದ್ದ ಎಸ್. ವಿ. ಗಿರೀಶ್ ಹಾಗೂ ಡಿಎಸ್ ಪಿ ಡಾ.ಸುಮಲಾ ಅವರು ತನಿಖೆ ನಡೆಸಿದ್ದರು. ಈ ತನಿಖೆ ವೇಳೆ ಕಲ್ಕಾರೆಯ ಹೊಳೆಯಲ್ಲಿ ದೊರೆತ ಮೂಳೆಗಳನ್ನು ಪತ್ತೆ ಹಚ್ಚುತ್ತಾರೆ. ಬಳಿಕ ಈ ಪ್ರಕರಣ ವನ್ನು ಸಿಐಡಿ ಗೆ ಒಪ್ಪಿಸಿದ್ದು, ಸಿಐಡಿ ಡಿಎಸ್ ಪಿ ಎಸ್ ಟಿ ಚಂದ್ರ ಶೇಖರ್ ಅವರು ತನಿಖೆ ಆರಂಭಿಸಿದ್ದರು. ಇವರು ಸಲ್ಲಿಸಿದ ಜಾರ್ಜ್ ಶೀಟ್ ನಲ್ಲಿ 167 ಸಾಕ್ಷಿಗಳು ಇದ್ದು, ಈ ಪೈಕಿ 78 ಸಾಕ್ಷಿಗಳನ್ನು ವಿಚಾರಣೆ ಮಾಡಲಾಗಿತ್ತು. ಹಾಗೂ 170 ದಾಖಲೆಗಳನ್ನು ಮಾರ್ಕ್ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯನಾಶದ ಆರೋಪ ಹೊತ್ತಿದ್ದ ಕಾರು ಚಾಲಕ ರಾಘವೇಂದ್ರನನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. 2016 ರ ಜುಲೈನಲ್ಲಿ ಪತಿಯನ್ನೇ ಕೊಂದು ಹೋಮ ಕುಂಡದಲ್ಲಿ ಸುಟ್ಟು ಹಾಕಿದ ಪ್ರಕರಣ ಇಡೀ ಕರಾವಳಿಗರನ್ನೇ ಬೆಚ್ಚಿ ಬೀಳಿಸುವಂತೆ ಮಾಡಿತ್ತು. ಇದೀಗ ಕೊಲೆ ನಡೆದು 5 ವರ್ಷಗಳ ಬಳಿಕ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದೆ.