ಮಂಗಳೂರು : ಕೇರಳದಲ್ಲಿ ಖೋಟಾ ನೋಟು ಮುದ್ರಿಸಿ ಮಂಗಳೂರಿನಲ್ಲಿ ಚಲಾವಣೆ ಮಾಡುತ್ತಿದ್ದ ನಾಲ್ವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕಾಸರಗೋಡು ಕೊಳತ್ತೂರಿನ ವಿ. ಪ್ರಿಯೇಶ್ (38), ಕಾಸರಗೋಡು ಮುಳಿಯಾರು ಗ್ರಾಮದ ವಿನೋದ್ ಕುಮಾರ್ ಕೆ. (33), ಕಾಸರಗೋಡು ಪೆರಿಯಾದ ಅಬ್ದುಲ್ ಖಾದರ್ ಎಸ್.ಎ. (58) ಮತ್ತು ಪುತ್ತೂರು ಬಲ್ನಾಡಿನ ಆಯೂಬ್ ಖಾನ್ (51) ಬಂಧಿತರು.
ಆರೋಪಿಗಳಿಂದ 2,13,500 ರೂ. ಮೌಲ್ಯದ 500 ರೂ. ಮುಖಬೆಲೆಯ 427 ಖೋಟಾ ನೋಟುಗಳು ಹಾಗೂ 4 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.
ಆರೋಪಿಗಳು ಸೋಮವಾರ ನಗರದ ಲಾಡ್ಜ್ ಬಳಿ ಖೋಟಾ ನೋಟುಗಳ ಚಲಾವಣೆಗೆ ಯತ್ನಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದರು. ಆರೋಪಿಗಳ ಪೈಕಿ ಪ್ರಿಯೇಶ್ ಕಾಸರಗೋಡು ಜಿಲ್ಲೆಯ ಚೆರ್ಕಳದಲ್ಲಿ ಪ್ರಿಂಟಿಂಗ್ ಪ್ರಸ್ ಹೊಂದಿದ್ದು ಅಲ್ಲಿ ಖೋಟಾ ನೋಟು ಗಳನ್ನು ಮುದ್ರಿಸುತ್ತಿದ್ದ. ಖೋಟಾ ನೋಟುಗಳನ್ನು ತಯಾರಿಸಲು ಬೇಕಾದ ಕಚ್ಚಾ ಸಾಮಗ್ರಿಗಳನ್ನು ಕೇರಳದ ಕೋಯಿಕ್ಕೋಡ್ ಮತ್ತು ನವದೆಹಲಿಯಿಂದ ಖರೀದಿಸುತ್ತಿದ್ದ. ಖೋಟಾ ನೋಟುಗಳನ್ನು ಮುದ್ರಿಸುವ ವಿಧಾನವನ್ನು ಯೂಟ್ಯೂಬ್ ಮೂಲಕ ವೀಕ್ಷಿಸುತ್ತಿದ್ದ. ಈತ ಮುದ್ರಣ ತಂತ್ರಜ್ಞಾನದಲ್ಲಿ 20 ವರ್ಷಗಳ ಅನುಭವ ಹೊಂದಿದ್ದಾನೆ. ಈತ ಸಾಕಷ್ಟು ಸಾಲ ಹೊಂದಿದ್ದ. 1 ಲಕ್ಷ ನೋಟುಗಳನ್ನು ಮುದ್ರಿಸಲು 25,000 ರೂ.ಗಳನ್ನು ಪಡೆದುಕೊಳ್ಳುತ್ತಿದ್ದ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

























