ಸುಳ್ಯ : ಪುತ್ತೂರು ಸಮೀಪದ ಕಬಕದಿಂದ ಕಾರಿನಲ್ಲಿ ನನ್ನನ್ನು ಅಪಹರಣ ಮಾಡಿದ್ದು, ರಕ್ಷಣೆ ಮಾಡಿ ಎಂದು 112ಗೆ ಅನಾಮಿಕ ವ್ಯಕ್ತಿಯೊಬ್ಬ ಕರೆ ಮಾಡಿದ ಹಿನ್ನೆಲೆಯಲ್ಲಿ ಜಾಲ್ಸೂರು ಹಾಗೂ ಸುಳ್ಯದಲ್ಲಿ ಸುಳ್ಯ ಪೊಲೀಸರು ನಾಕಾ ಬಂದಿ ಹಾಕಿ ಕಾದು ಅಂತಹ ಯಾವುದೇ ಪ್ರಕರಣ ಪತ್ತೆಯಾಗದ ಹಿನ್ನೆಲೆಯಲ್ಲಿ ಮರಳಿದ ಘಟನೆ ನಡೆದಿದೆ.
ಕರೆ ಬಂದ ತತ್‌ಕ್ಷಣ 112 ನಿರ್ವಹಣೆ ಕೇಂದ್ರದಿಂದ ಪುತ್ತೂರು ನಗರ ಟೌನ್ ಪೊಲೀಸ್ ಠಾಣೆಗೆ ತಿಳಿಸಿದ್ದು, ಅವರು ಕೂಡಲೇ ಸುಳ್ಯ ಹಾಗೂ ಇತರ ಠಾಣೆಗಳಿಗೆ ಮಾಹಿತಿ ರವಾನಿಸಿದರು.
ಸುಳ್ಯ ಪೊಲೀಸರು ಸುಳ್ಯ ಹಾಗೂ ಜಾಲ್ಸೂರು ಬಳಿ ನಾಕಾ ಬಂದಿ ಹಾಕಿ ಬಹಳ ಸಮಯ ಕಾದು ಕುಳಿತರು. ಯಾವುದೇ ಶಂಕಿತ ವಾಹನ ಬಾರದಿದ್ದಾಗ ಪೊಲೀಸರು ಮರಳಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


























