ಮಂಗಳೂರು : ಸರಕಾರಿ ಪಿಯು ಕಾಲೇಜಿನಲ್ಲಿ ನಡೆದ ಚೂರಿ ಇರಿತ ಪ್ರಕರಣವನ್ನು ಇಲಾಖೆ ಕೂಲಂಕುಶವಾಗಿ ತನಿಖೆ ನಡೆಸಿ, ವಿದ್ಯಾರ್ಥಿಯ ಮೇಲೆ ದಾಖಲಿಸಿರುವ ಸುಳ್ಳು ಪ್ರಕರಣವನ್ನು ಕೂಡಲೇ ಹಿಂತೆಗೆದುಕೊಳ್ಳಬೇಕೆಂದು ದಕ್ಷಿಣ ಕನ್ನಡ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನಂದನ್ ಮಲ್ಯ ಆಗ್ರಹಿಸಿದ್ದಾರೆ.
ಕೊಂಬೆಟ್ಟು ಸರಕಾರಿ ಕಾಲೇಜಿನ ವಿದ್ಯಾರ್ಥಿನಿಯು ನನಗೆ ಅದೇ ಕಾಲೇಜಿನ ವಿದ್ಯಾರ್ಥಿಯೊಬ್ಬ ಚೂರಿ ಇರಿತ ನಡೆಸಿದ್ದ ಎಂದು ಒಂದು ನಾಟಕೀಯ ಪ್ರಕರಣವನ್ನು ಸೃಷ್ಟಿಸಿದ್ದು, ಇದು ಪುತ್ತೂರಿನಲ್ಲಿ ಗೊಂದಲದ ಪರಿಸ್ಥಿತಿಯನ್ನು ನಿರ್ಮಿಸಿತ್ತು. ಪೊಲೀಸರು ವಿದ್ಯಾರ್ಥಿನಿ ನೀಡಿದ ದೂರಿನನ್ವಯ ಯುವಕನ ಮೇಲೆ ಪೋಕ್ಸೋ ಪ್ರಕರಣ ದಾಖಲು ಮಾಡಿದ್ದು, ಬಾಲಕನನ್ನು ವಿಚಾರಣೆ ನಡೆಸಿದಾಗ ಸತ್ಯಾಂಶ ತಿಳಿದು ಇದು ಒಂದು ಸುಳ್ಳು ಪ್ರಕರಣ ಎಂದು ತಿಳಿದು ವಿದ್ಯಾರ್ಥಿಯನ್ನು ಪಾಲಕರೊಂದಿಗೆ ಬಿಟ್ಟು ಕಳುಹಿಸಿರುತ್ತಾರೆ. ಈ ಮಧ್ಯೆ ಕೆಲ ಸಂಘಟನೆಗಳು ಮಾಧ್ಯಮಗಳಲ್ಲಿ ಏನೇನೋ ಹೇಳಿಕೆಯನ್ನು ಕೊಡುತ್ತಾ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ.
ಪೋಲಿಸ್ ಇಲಾಖೆಯು ಯಾವುದೋ ಸಂಘಟನೆಗಳ ಅಥವಾ ಯಾರದ್ದೋ ಒತ್ತಾಯಕ್ಕೆ ಮಣಿದು ಕಾಲೇಜು ವಿದ್ಯಾರ್ಥಿ ವಿರುದ್ಧ ತನಿಖೆ ನಡೆಸದೆ ಪ್ರಕರಣ ದಾಖಲು ಮಾಡಬಾರದಿತ್ತು. ಈ ರೀತಿಯ ಪ್ರಕರಣಗಳಲ್ಲಿ ಕೂಲಂಕುಶ ತನಿಖೆ ನಡೆಸದೆ ಪ್ರಕರಣ ದಾಖಲಿಸುವುದರಿಂದ ವಿದ್ಯಾರ್ಥಿಯ ಭವಿಷ್ಯಕ್ಕೆ ಮಾರಕವಾಗುತ್ತದೆ. ವಿದ್ಯಾರ್ಥಿಯು ತನ್ನ ತಪ್ಪಿಲ್ಲದೆ ಪಶ್ಚಾತಾಪ ಪಡುವಂತಾಗಿದೆ. ವಿದ್ಯಾದೇಗುಲವಾದ ಶಾಲಾ ಕಾಲೇಜುಗಳಲ್ಲಿ ಕೋಮು ಸೌಹಾರ್ದ ಕದಡಂತೆ ಸರಕಾರ ಮತ್ತು ಪೋಲಿಸು ಇಲಾಖೆ ಎಚ್ಚರಿಕೆ ವಹಿಸಬೇಕು. ವಿದ್ಯಾರ್ಥಿಯ ಮೇಲೆ ದಾಖಲಿಸಿದ ಸುಳ್ಳು ಪ್ರಕರಣವನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

























