ಕಾರ್ಕಳ : ಹಿಂದೂ ಯುವತಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಮುಖಂಡರು ಪತ್ರಿಕಾಗೋಷ್ಠಿ ನಡೆಸಿದ್ದು, ಆರೋಪಿ ಪರ ವಾದಿಸದಂತೆ ಮುಸ್ಲಿಂ ವಕೀಲರಲ್ಲಿ ಮನವಿ ಮಾಡಿದರು.
ಕಾರ್ಕಳ ಕೋಮುಸೌಹಾರ್ದತೆಗೆ ಹೆಸರುವಾಸಿಯಾಗಿರುವ ಪ್ರದೇಶವಾಗಿದೆ. ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಅಲ್ತಾಫ್ ಮೂಲತಃ ಕಾರ್ಕಳದವನಲ್ಲ., ಹೊರ ರಾಜ್ಯದಿಂದ ಬಂದು ಕಾರ್ಕಳದ ಕೆಲ ಪ್ರದೇಶಗಳಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದ. ಆತ ಮತ್ತು ಅವನ ಸ್ನೇಹಿತರು ಡ್ರಗ್ಸ್ ತೆಗೆದುಕೊಂಡು ಈ ರೀತಿಯ ಕೃತ್ಯವೆಸಗಿದ್ದಾರೆ.
ಯಾರೇ ಆಗಲಿ, ಯಾವ ಸಮುದಾಯವೇ ಆಗಲಿ ಮುಸ್ಲಿಂ ಜಮಾಯತ್ ವತಿಯಿಂದ ಘಟನೆಯನ್ನು ಖಂಡಿಸುತ್ತಿದ್ದೇವೆ. ಪೊಲೀಸ್ ಇಲಾಖೆ ಈ ರೀತಿಯ ಕೃತ್ಯವೆಸಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಕಾರ್ಕಳ ಸುತ್ತಮುತ್ತಲಿನ ಮುಸ್ಲಿಂ ವಕೀಲರು ಅಲ್ತಾಫ್ ಹಾಗೂ ಆತನ ಸ್ನೇಹಿತರ ಪರವಾಗಿ ವಾದಿಸಬಾರದು ಎಂದು ಮನವಿ ಮಾಡಿದರು.
ದುಷ್ಚಟದ ಜೊತೆ ಸಮಾಜದ್ರೋಹಿ ಕೆಲಸ ಮಾಡುತ್ತಿರುವ ವ್ಯಕ್ತಿಗೆ ಯಾವುದೇ ಸಹಕಾರ ನೀಡಬಾರದು. ಅಲ್ತಾಫ್ ಮುಸ್ಲಿಂ ಜಮಾಯತ್ ನಲ್ಲಿಲ್ಲ, ಒಂದು ವೇಳೆ ಇದ್ದರೂ ಆತನನ್ನು ಬಹಿಷ್ಕರಿಸಲಾಗುವುದು ಎಂದು ಹೇಳಿದರು.
ಯುವತಿಯ ಕುಟುಂಬಕ್ಕೆ ನಮ್ಮ ಬೆಂಬಲ ಸದಾವಿರುತ್ತದೆ ಎಂದು ಹೇಳಿದರು.
ಕಾರ್ಕಳದಲ್ಲಿ ಗಾಂಜಾ, ಡ್ರಗ್ಸ್ ಮಾದಕ ವಸ್ತುಗಳ ಚಟುವಟಿಕೆ ರಾಜಾರೋಷವಾಗಿ ನಡೆಯುತ್ತಿದ್ದು, ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ವಿನಂತಿಸಿದರು.
ಮುಸ್ಲಿಂ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


























