ಪುತ್ತೂರು : ದರ್ಬೆ ಮೊಯಿದ್ದಿನ್ ಕಾಂಪ್ಲೆಕ್ಸ್‌ನಲ್ಲಿ ವ್ಯವಹರಿಸುತ್ತಿರುವ ಆಶೀರ್ವಾದ ಎಂಟರ್‌ಪ್ರೈಸಸ್ ಲಕ್ಷ್ಮೀ ಸ್ಟೀಂನ 2ನೇ ಸೀಝನ್ ಶುಭಾರಂಭ, ಸಂಸ್ಥೆಯ ಲೋಗೋ ಅನಾವರಣ, ಮೊಬೈಲ್ ಆ್ಯಪ್ ಬಿಡುಗಡೆ ಹಾಗೂ 163 ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣಾ ಕಾರ್ಯಕ್ರಮ ಬೈಪಾಸ್ ರಸ್ತೆಯಲ್ಲಿರುವ ಅಶ್ಮಿ ಕಂಪರ್ಟ್‌ನಲ್ಲಿ ನಡೆಯಿತು.

ಅತಿಥಿಗಳಾದ ದೇವದಾಸ್ ಕಾಪಿಕಾಡ್ ಸಂಸ್ಥೆಯ ಲೋಗೋ ಬಿಡುಗಡೆಗೊಳಿಸಿದರು. ವಾಲ್ಟರ್ ನಂದಳಿಕೆಯವರು ಸಂಸ್ಥೆಯ ಬ್ರೋಚರ್ ಬಿಡುಗಡೆ ಮಾಡಿದರು. ರವಿರಾಮಕುಂಜ ಸಂಸ್ಥೆಯ ಮೊಬೈಲ್ ಆ್ಯಪ್ ಬಿಡುಗಡೆಗೊಳಿಸಿದರು.

ತುಳು ಚಿತ್ರರಂಗದ ನಿರ್ಮಾಪಕರು ಹಾಗೂ ಹಿರಿಯ ಕಲಾವಿದ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಬಳಿಕ 2ನೇ ಸೀಝನ್ ಮತ್ತು ಸಂಸ್ಥೆಯ ಲೋಗೋ ಅನಾವರಣ ಮಾಡಿ ಮಾತನಾಡಿ, ನಿಮ್ಮ ಸಂಸ್ಥೆಯ ಪಾಲುದಾರರಲ್ಲಿ ಒಗ್ಗಟ್ಟು ಇದೆ. ತುಂಬಾ ಖುಷಿಯಾಯಿತು. ನಿಮಗೆಲ್ಲರಿಗೂ ಉಪಕಾರ ಮಾಡಲು ಈ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಇವತ್ತು ಪ್ರತೀ ಮನೆಗೂ ಆಧಾರಸ್ತಂಭವಾಗಿ ನಿಲ್ಲುವ ಸಂಸ್ಥೆಯಾಗಿ ಆಶೀರ್ವಾದ ಬೆಳೆದಿದೆ. ನಿಮ್ಮಲ್ಲಿ ನಂಬಿಕೆಯ ನಗು ಇದೆ. ಎಂದರು. ನಿಮ್ಮ ಆಶೀರ್ವಾದದಿಂದ ನಾನು ಮೇಲೆ ಬಂದಿದ್ದೇನೆ. ನಾನು ತಿನ್ನುವ ಅನ್ನದ ಬಟ್ಟಲು ನೀವು ಎಂದ ಅವರು ಪ್ರತೀ ಊರಲ್ಲಿ ಆಶೀರ್ವಾದ ಸಂಸ್ಥೆ ಹುಟ್ಟಲಿ ಅಲ್ಲದೆ ಅಂತರಾಷ್ಟ್ರೀಯ ಮಟ್ಟಕ್ಕೂ ವಿಸ್ತರಿಸಲಿ ಎಂದು ಹೇಳಿ ಹಾರೈಸಿದರು.

ಸಂಸ್ಥೆಯ ಬ್ರೋಚರ್ ಬಿಡುಗಡೆ ಮಾಡಿದ ದೈಜಿವರ್ಲ್ಡ್ ಸಂಸ್ಥಾಪಕ ವಾಲ್ಟರ್ ನಂದಳಿಕೆ ಮಾತನಾಡಿ ಜಗತ್ತಿನಲ್ಲಿ ದುಬಾರಿ ವಸ್ತು ಎಂದರೆ ನಂಬಿಕೆ, ನಂಬಿಕೆಗೆ ಅರ್ಹವಾದ ಮಕ್ಕಳಿಗೆ ಬ್ಯಾಗ್ ನೀಡಿ ಕಲಿಕೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಇದು ಹೆಮ್ಮೆಯ ವಿಷಯ ಎಂದರು. ನಿಮ್ಮ ಮಕ್ಕಳು ಕಲಿಕೆಯಲ್ಲಿ ಹಿಂದೆ ಇದ್ದು ಉಳಿದ ಚಟುವಟಿಕೆಗಳಲ್ಲಿ ಪ್ರತಿಭಾವಂತರಾಗಿದ್ದರೆ ಅವರಿಗೆ ಪ್ರೋತ್ಸಾಹ ನೀಡಿ ಮಕ್ಕಳ ಕನಸನ್ನು ಕೇಳಿ. ಮಕ್ಕಳಿಗೆ ಆಸ್ತಿ ಮಾಡಬೇಡಿ. ಮಕ್ಕಳನ್ನು ಸಮಾಜದ ಆಸ್ತಿ ಮಾಡಿ ಎಂದರು. ಮಕ್ಕಳ ಅಂಕಗಳೇ ಎಲ್ಲವೂ ಅಲ್ಲ, ಅದು ಸರ್ಟಿಫಿಕೇಟ್ ಮಾತ್ರ ಎಂದು ಪೋಷಕರಿಗೆ ತಿಳಿಸಿದರು.

ಸಂಸ್ಥೆಯ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ ತುಳು ಚಿತ್ರರಂಗ ಕಲಾವಿದ ಹಾಗೂ ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್ ರವಿ ರಾಮಕುಂಜ ಮಾತನಾಡಿ ಸಂಸ್ಥೆಯು ಸ್ಥಿರ ಜೊತೆಗೆ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದೆ. ಪುತ್ತೂರು ಅಲ್ಲದೆ, ಸುಳ್ಯ, ಮಂಗಳೂರು ಮುಂದಾದ ಕಡೆಗಳಲ್ಲಿಯೂ ಬೆಳೆಯಲಿ ಎಂದು ಹಾರೈಸಿದರು.

ಯೂಟ್ಯೂಬರ್ ಆತ್ಮೀಯ ಗಾನ ನಾಯಕ್ ಮಾತನಾಡಿ ಇಂದು ನನ್ನನ್ನು ಗುರುತಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಆಶೀರ್ವಾದ ಎಂಟರ್‌ಪ್ರೈಸಸ್ ಸಂಸ್ಥೆಗೆ ಎಲ್ಲರೂ ಆಶೀರ್ವಾದ ಮಾಡಬೇಕು ಈ ಮೂಲಕ ಸಂಸ್ಥೆ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.
ಝೀ ಕನ್ನಡ ಛೋಟಾ ಚಾಂಪಿಯನ್ ವಿನ್ನರ್ ಬೇಬಿ ಆತ್ಮೀ, ಸಿಝ್ಲರ್ ಸಾಫ್ಟ್ ಡ್ರಿಂಕ್ಸ್ ಮತ್ತು ಸಿಝ್ಲರ್ ಅಗ್ರಿ ಝೋನ್ ಮಾಲಕ ಪ್ರಸನ್ನಕುಮಾರ್ ಶೆಟ್ಟಿ, ಉದ್ಯಮಿ ಲಕ್ಷ್ಮಣ ಬೈಲಾಡಿ ಹಾಗೂ ಹುಬ್ಬಳ್ಳಿ ಟ್ರೇಡರ್ಸ್‌ನ ಉದ್ಯಮಿ ಜಯರಾಂ ಶೆಟ್ಟರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅತಿಥಿ ಗಣ್ಯರಾದ ದೇವದಾಸ್ ಕಾಪಿಕಾಡ್, ವಾಲ್ಟರ್ ನಂದಳಿಕೆ, ರವಿ ರಾಮಕುಂಜ, ಆತ್ಮೀಯ ಗಾನ ನಾಯಕ್ ಹಾಗೂ ಬೇಬಿ ಆತ್ಮೀಯೊಂದಿಗೆ ಕೆಲವರು ಸೆಲ್ಫಿ ತೆಗೆದು ಸಂಭ್ರಮಿಸಿದರು.
ಸಂಸ್ಥೆಯ ಪಾಲುದಾರ ದೇವಿಪ್ರಸಾದ್ ಮೊಬೈಲ್ ಆ್ಯಪ್ ಬಗ್ಗೆ ಮಾಹಿತಿ ನೀಡಿದರು. ಸಹಕರಿಸಿದ ಕೃಷ್ಣ ಹಾಗೂ ಮೋಹನ ನಾಯಕ್ ರನ್ನು ಗೌರವಿಸಲಾಯಿತು. ಸಂಸ್ಥೆಯ ಪಾಲುದಾರರಾದ ದೇವಿಪ್ರಸಾದ್, ಸಬ್ಬಾನ್, ಸಿರಾಜ್, ಸುಲ್ತಾನ್, ಜಾಹೀರ್ ಅತಿಥಿಗಳನ್ನು ಶಾಲು ಹಾಕಿ ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣಕ್ಕೆ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

























