ಉಪ್ಪಿನಂಗಡಿ : ಅಪರಿಚಿತ ವ್ಯಕ್ತಿಯ ಮೃತದೇಹವೊಂದು ನೇತ್ರಾವತಿ ನದಿಯಲ್ಲಿ ತೇಲಿ ಹೋದ ಘಟನೆ ನಡೆದಿದೆ.
ನದಿಯಲ್ಲಿ ನೀರಿನ ಮಟ್ಟ ಕಡಿಮೆ ಇರುವುದರಿಂದ ಪ್ರವಾಹ ರಕ್ಷಣಾ ತಂಡದವರಿಗೆ ದೋಣಿಗೆ ಒಬಿಎಂ (ಇಂಜಿನ್) ಸಿಕ್ಕಿಸಿ ದೋಣಿ ಚಲಾಯಿಸಲು ಸಾಧ್ಯವಾಗದಿರುವುದರಿಂದ ಅವರ ಕೈಗೂ ಮೃತದೇಹ ಸಿಗದೆ ನೀರಿನಲ್ಲಿ ತೇಲಿಕೊಂಡು ಹೋಗಿದೆ ಎಂದು ತಿಳಿದು ಬಂದಿದೆ.
ನೀಲಿ ಬಣ್ಣದ ಒಳ ಉಡುಪನ್ನು ತೊಟ್ಟಿರುವ ಮೃತದೇಹವೊಂದು ನದಿಯಲ್ಲಿ ತೇಲಿ ಹೋಗುತ್ತಿರುವುದನ್ನು ಉಪ್ಪಿನಂಗಡಿ ಬಸ್ ನಿಲ್ದಾಣ ಬಳಿಯ ನೇತ್ರಾವತಿ ಸೇತುವೆಯ ಮೇಲಿನಿಂದ ಸಾರ್ವಜನಿಕರು ನೋಡಿದ್ದು, ಬಳಿಕ ಈ ಬಗ್ಗೆ ಉಪ್ಪಿನಂಗಡಿ ದೇವಾಲಯದ ಬಳಿಯಿರುವ ಗೃಹರಕ್ಷಕದಳದವರನ್ನೊಳಗೊಂಡ ಪ್ರವಾಹ ರಕ್ಷಣಾ ತಂಡಕ್ಕೆ ಮಾಹಿತಿ ನೀಡಿದ್ದಾರೆ.
ಈ ವೇಳೆ ಮೃತದೇಹ ನದಿಯಲ್ಲಿ ತೇಲಿಕೊಂಡು ಮುಂದಕ್ಕೆ ಸಾಗಿದ್ದು, ದೇವಾಲಯದ ಬಳಿ ದೋಣಿಯೊಂದಿಗೆ ನದಿಗಿಳಿದು ಮೃತದೇಹವನ್ನು ಹಿಡಿಯಲು ಪ್ರವಾಹ ರಕ್ಷಣಾ ತಂಡದವರು ಕಾದು ಕುಳಿತಿದ್ದರಾದರೂ, ಮೃತದೇಹ ನದಿಯ ಮತ್ತೊಂದು ಬದಿಯಿಂದ ತೇಲಿಕೊಂಡು ಮುಂದಕ್ಕೆ ಸಾಗಿ ಹೋಗಿದ್ದರಿಂದ ಅವರಿಗೂ ಮೃತದೇಹವನ್ನು ಹಿಡಿಯಲು ಸಾಧ್ಯವಾಗಲಿಲ್ಲ.
ಮೃತದೇಹ ಗಂಡಸಿನದ್ದಾಗಿರಬೇಕೆಂದು ಶಂಕಿಸಲಾಗಿದೆ.

























