ಉಡುಪಿ : ರೈಲಿನಲ್ಲಿ ಯುವತಿಯ ಮಾನಭಂಗ ಯತ್ನ ನಡೆದಿದ್ದು, ಮಾಹಿತಿ ಪಡೆದ 24 ಗಂಟೆಯಲ್ಲೇ ಮಣಿಪಾಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಭಟ್ಕಳ ಮೂಲದ ಮೊಹಮ್ಮದ್ ಶುರೈಮ್ (22) ಬಂಧಿತ ಆರೋಪಿ.
ರೈಲಿನಲ್ಲಿ ಯುವತಿ ಬರುತ್ತಿದ್ದ ವೇಳೆ ಘಟನೆ ನಡೆದಿದೆ. ಮೂಲತಃ ಉಡುಪಿ ತಾಲೂಕಿನ ಮಣಿಪಾಲದ ಯುವತಿ ಬೆಂಗಳೂರಿನಲ್ಲಿ ಐಟಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ಉಡುಪಿಗೆ ಹೊರಟಿದ್ದರು. ರೈಲು ಸಂಚರಿಸುತ್ತಿದ್ದಾಗಲೇ ಯುವಕನೋರ್ವ ಅಸಭ್ಯ ವರ್ತನೆ ತೋರಿದ್ದಾನೆ. ಇನ್ನೇನು ಉಡುಪಿ ಬರಲು ಅರ್ಧ ಗಂಟೆ ಇರುವಾಗ ಮಾನಭಂಗಕ್ಕೆ ಯತ್ನಿಸಿದ್ದಾನೆ. ಕೂಡಲೇ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಆರೋಪಿ ಶುರೈಮ್ ಕ್ಷಮೆಯಾಚಿಸಿದ್ದಾನೆ. ಘಟನೆ ಕುರಿತು ಉಡುಪಿ ರೈಲ್ವೆ ಪೊಲೀಸ್ಗೆ ಯುವತಿ ಮಾಹಿತಿ ನೀಡಿದ್ದಾರೆ.
ರೈಲ್ವೆ ಮದತ್ ಆ್ಯಪ್ ಮೂಲಕವೂ ದೂರು ನೀಡಿದ್ದಾರೆ. ಯುವತಿ ನೀಡಿದ ಮಾಹಿತಿ ಆಧರಿಸಿ ಮಣಿಪಾಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಯುವತಿ ನೀಡಿದ್ದ ದೂರು, ಹಾಗೂ ಕೆಲ ಸುಳಿವುಗಳನ್ನು ಆಧರಿಸಿ ಪೊಲೀಸರು ತನಿಖೆ ನಡೆಸಿದ್ದೇ ರೋಚಕ. ಮೊದಲಿಗೆ ಪೊಲೀಸರು ರೈಲಿನಲ್ಲಿ ಪ್ರಯಾಣಿಸಿದ್ದ ಎಲ್ಲಾ ಪ್ರಯಾಣಿಕರ ವಿವರ ಪಡೆದು ಬಳಿಕ ಅದರಿಂದ ಶಾರ್ಟ್ ಲಿಸ್ಟ್ ಮಾಡಿದರು. ಘಟನೆ ನಡೆದದ್ದು ವೀಕೆಂಡ್ ಆದ ಹಿನ್ನೆಲೆ ಬೆಂಗಳೂರು-ಮುರ್ಡೇಶ್ವರ ನಡುವೆ ಸಂಚರಿಸುವ ಮುರ್ಡೇಶ್ವರ ಎಕ್ಸ್ ಪ್ರೆಸ್ ರೈಲಿನಲ್ಲಿ ಶನಿವಾರ ಸಾವಿರಕ್ಕೂ ಹೆಚ್ಚು ಮಂದಿ ಪ್ರಯಾಣಿಸಿದ್ದರು. 3 ಹಂತಗಳಲ್ಲಿ ಶಾರ್ಟ್ ಲಿಸ್ಟ್ ರೆಡಿ ಮಾಡಿ ಪೊಲೀಸರು ಕಾರ್ಯಾಚರಣೆ ಮಾಡಿದ್ದಾರೆ.
ಬಳಿಕ ಆರೋಪಿ ಭಟ್ಕಳದಲ್ಲಿ ಇಳಿದು ಹೋಗಿದ್ದನ್ನ ಪತ್ತೆ ಹಚ್ಚಿದ್ದ ಪೊಲೀಸರು ಸಿಸಿಟಿವಿ ಫೂಟೇಜ್, ಪ್ರಯಾಣಿಕರ ವಿವರ ಆಧರಿಸಿ ಕಾರ್ಯಾಚರಣೆ ನಡೆಸಿ ಭಟ್ಕಳದ ನಿವಾಸದಿಂದಲೇ ಆರೋಪಿಯನ್ನು ಬಂಧಿಸಿದ್ದಾರೆ.



























