ಬೆಂಗಳೂರು : ಆರೋಗ್ಯ ಹಾಗೂ ಆಹಾರ ಸುರಕ್ಷತಾ ಇಲಾಖೆ ಜನರ ಹಿತದೃಷ್ಟಿ ಕಾಪಾಡುವ ಸಲುವಾಗಿ, ಅನೇಕ ಬದಲಾವಣೆಗಳನ್ನು ಮಾಡಲು ಮುಂದಾಗಿದೆ. ಜನರು ಸೇವಿಸುವ ಆಹಾರ ದಿನದಿಂದ ದಿನಕ್ಕೆ ಕಲುಷಿತವಾಗುತ್ತಿದ್ದು, ಕಲಬೆರಕೆ ಆಹಾರದ ವಿರುದ್ಧ ಸಮರ ಸಾರಿದೆ.
ಗೋಬಿ, ಕಬಾಬ್, ಕಾಟನ್ ಕ್ಯಾಂಡಿ, ಪಾನಿಪುರಿ ತಿನಿಸುಗಳ ಮೇಲೆ ಆಹಾರ ಇಲಾಖೆ ಒಂದಷ್ಟು ನಿರ್ಬಂಧಗಳನ್ನು ವಿಧಿಸಿತ್ತು. ಜೊತೆಗೆ ಹೋಟೆಲ್‌ಗಳು ಹಾಗೂ ಬೀದಿ ಬದಿ ವ್ಯಾಪಾರಿಗಳ ಮೇಲೂ ಕೂಡಾ ಒಂದಷ್ಟು ನಿರ್ಬಂಧಗಳನ್ನು ಹೇರಲಾಗಿತ್ತು. ಇಲಾಖೆಯ ಮುಂದಿನ ಗುರಿ ಬೇಕರಿ ತಿನಿಸುಗಳಾಗಿವೆ.
ಬೇಕರಿಯ ತಿನಿಸುಗಳ ಮೇಲೆ ನಿರ್ಬಂಧ ತರಲು ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ ಮೊದಲಿಗೆ ಸಾಮಾನ್ಯವಾಗಿ ಜನರು ಹೆಚ್ಚು ಸೇವನೆ ಮಾಡುವ ಕೇಕ್‌ಗಳ ಮೇಲೆ ನಿಗಾ ವಹಿಸಲಾಗುತ್ತಿದೆ. ಕೇಕ್‌ಗೆ ಬಳಸುವ ಮೈದಾಹಿಟ್ಟು, ಕೋಕೋ ಪೌಡರ್, ಕ್ರೀಮ್‌ಗಳಿಗೆ ಬಳಸುವ ಪದಾರ್ಥಗಳು, ಫ್ಲೇವರ್‌ಗಳು ಹಾಗೂ ಬಣ್ಣ ಬಣ್ಣವಾಗಿರಲು ಬಳಸುವ ಕಲರ್‌ಗಳನ್ನ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ಪೈನಾಪಲ್, ರೆಡ್ ವೆಲ್ವೆಟ್, ಚಾಕೋಲೇಟ್ ಸೇರಿದಂತೆ ವಿವಿಧ ಫ್ಲೇವರ್‌ಗಳನ್ನ ಜನರು ಇಷ್ಟ ಪಡುವುದರಿಂದ ಅವುಗಳ ತಯಾರಿಕೆ ಅಥವಾ ಅದಕ್ಕೆ ಹಾಕುವ ಪದಾರ್ಥಗಳು ಜನರು ಆರೋಗ್ಯಕ್ಕೆ ಪೂರಕವಾ ಅಥವಾ ಮಾರಕವಾ ಎಂಬುದನ್ನು ತಿಳಿಯಲು ಮುಂದಾಗಿದೆ.
ಸುಮಾರು 264 ಕಡೆಗಳಲ್ಲಿ ಕೇಕ್‌ಗಳ ಸ್ಯಾಂಪಲ್ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಇದರ ವರದಿಗೆ ಇಲಾಖೆ ಕಾಯುತ್ತಿದೆ. ಒಂದು ವೇಳೆ, ವರದಿ ಪಾಸಿಟಿವ್ ಬಂದಿದ್ದೇ ಆದಲ್ಲಿ ಕೆಲವೊಂದು ಪದಾರ್ಥಗಳ ಮೇಲೆ ನಿರ್ಬಂಧ ಹೇರಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಕೇಕ್ ತನ್ನ ಮೂಲ ಸ್ವಾದವನ್ನು ಕಳೆದುಕೊಳ್ಳಲಿದೆ.
ಆಹಾರ ಸರಕ್ಷತಾ ಹಾಗೂ ಆರೋಗ್ಯ ಇಲಾಖೆ ಸರಣಿ ರೇಡ್‌ಗಳು ಹಾಗೂ ಆಹಾರಗಳಿಗೆ ಬಳಸುವ ಕೆಲವೊಂದು ಪದಾರ್ಥಗಳಿಗೆ ನಿರ್ಬಂಧ ವಿಧಿಸುತ್ತಿರುವುದನ್ನು ಬೇಕರಿ ಮಾಲಕರ ಸಂಘಟನೆ ಸ್ವಾಗತ ಮಾಡಿದೆ. ನಾವು ಸಹಜ ಕಲರ್ ಬಳಕೆ ಮಾಡುತ್ತೇವೆ. ಕೆಮಿಕಲ್ ಬಳಕೆ ಮಾಡಲ್ಲ ಆಹಾರ ಇಲಾಖೆಯ ಕ್ರಮ ಸರಿಯಾಗಿದೆ ಎಂದು ಬೇಕರಿ ಮಾಲಕರು ಹೇಳಿದ್ದಾರೆ.



























