ವಿಮಾನದಲ್ಲಿ ಬಂದು ಕಳ್ಳತನ ಮಾಡುತ್ತಿದ್ದ ದಂಪತಿ ಸೇರಿ ಮೂವರು ಆರೋಪಿಗಳನ್ನು ಸಂಜಯನಗರ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತರನ್ನು ಉತ್ತರ ಪ್ರದೇಶ ಮೂಲದ ಅಕ್ಬರ್ (38), ಪತ್ನಿ ಮುಬೀನಾ (32) ಹಾಗೂ ಸೋನು ಯಾದವ್ (39) ಎಂದು ಗುರುತಿಸಲಾಗಿದೆ.
ಮೂವರು ವಿಮಾನದಲ್ಲಿ ಬೆಂಗಳೂರಿಗೆ ಬಂದು ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಬಳಿಕ ಮನೆಗಳ್ಳತನ ಮಾಡುತ್ತಿದ್ದರು. ಕೊನೆಗೂ ಮೂವರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 30.50 ಲಕ್ಷ ರೂಪಾಯಿ ಮೌಲ್ಯದ 405 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಕಳೆದ ಮೇ 10ರಂದು ಎಇಸಿಎಸ್ ಲೇಔಟ್ ನಿವಾಸಿಯೊಬ್ಬರ ಮನೆಯಲ್ಲಿ ಕಳ್ಳತನ ನಡೆದಿತ್ತು. ಹಾಡು ಹಗಲೇ ಮನೆಯಲ್ಲಿದ್ದ ಆಭರಣಗಳನ್ನು ಕಳ್ಳರು ದೋಚಿದ್ದರು. ಬೀಗ ಮುರಿದು ಎಲ್ಲವನ್ನು ಕಳವು ಮಾಡಿದ್ದರು. ಈ ಪ್ರಕರಣ ಸಂಬಂಧ ದೂರು ದಾಖಲಾಗಿತ್ತು.
ದಾಖಲಾದ ದೂರಿನ ಮೇರೆಗೆ ಇನ್ಸ್ಪೆಕ್ಟರ್ ಭಾಗ್ಯವತಿ ಜೆ.ಬಂಟ ನೇತೃತ್ವದಲ್ಲಿ ಕಳ್ಳರನ್ನು ಹುಡುಕಲಾಗಿದೆ. ಈ ವೇಳೆ ಅಲ್ಲಿನ ಕಟ್ಟಡಗಳ ಸುತ್ತಮುತ್ತಲಿನ ಸಿಸಿಟಿವಿ ಪರಿಶೀಲಿಸಲಾಗಿದೆ.
ಸಿಸಿಟಿವಿ ದೃಶ್ಯದಲ್ಲಿ ಸುಳಿವೊಂದು ಸಿಕ್ಕಿದ್ದು, ಅದರ ಬೆನ್ನಟ್ಟಿದ ಪೊಲೀಸರಿಗೆ ಆರೋಪಿ ಸೋನು ಯಾದವ್ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಇರೋದು ಪತ್ತೆಹಚ್ಚಿ ಅರೆಸ್ಟ್ ಮಾಡುತ್ತಾರೆ. ನಂತರ ಆತನ ವಿಚಾರಣೆ ಮಾಡಿದಾಗ ಬಾಯಿ ಬಿಡುತ್ತಾನೆ.
ಸೋನು ಬಾಯಿಬಿಟ್ಟ ಸಂಗತಿ ಆಧಾರದ ಮೇಲೆ ಪೊಲೀಸರು ದೆಹಲಿ ಮತ್ತು ಉತ್ತರ ಪ್ರದೇಶಕ್ಕೆ ತೆರಳಿ ಸ್ಥಳೀಯ ಪೊಲೀಸರ ನೆರವು ಪಡೆಯುತ್ತಾರೆ. ಈ ವೇಳೆ ಅಕ್ಬರ್ ಮತ್ತು ಮುಬೀನಾಳನ್ನು ಬಂಧಿಸುತ್ತಾರೆ. ಬಂಧಿತರು ಗಾಜಿಯಾಬಾದ್ನಲ್ಲಿ ಪೊಲೀಸರ ವಶವಾಗುತ್ತಾರೆ.
ಇನ್ನು ಬಂಧಿತ ಮೂವರು ಕರ್ನಾಟಕ ಮಾತ್ರವಲ್ಲದೆ, ಮಹಾರಾಷ್ಟ್ರ, ಗುಜರಾತ್ ಸೇರಿ ವಿವಿಧ ರಾಜ್ಯಗಳಲ್ಲಿ ಕಳ್ಳತನ ಮಾಡಿದ್ದಾರೆ. ಮೂವರು ರೈಲು ಮತ್ತು ವಿಮಾನದಲ್ಲಿ ಬಂದು ಬೀಗ ಹಾಕಿದ ಮನೆಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದರು.