ಮಂಗಳೂರು : ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗುವನ್ನು ಅಪಹರಿಸಿದ ಘಟನೆ ನಗರದ ಪಡೀಲ್ ಬಳಿ ಸಂಭವಿಸಿದ್ದು, ಕಂಕನಾಡಿ ನಗರ ಠಾಣೆಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ದೂರು ಬಂದ ಎರಡು ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಕೇರಳ ಎರ್ನಾಕುಲಂ ಜಿಲ್ಲೆಯ ತಾತಾಪಿಲ್ಲಿ ನಿವಾಸಿ ಅನೀಶ್ ಕುಮಾರ್(59) ಬಂಧಿತ ಆರೋಪಿ.
ಪಡೀಲ್ನ ಅರಣ್ಯ ಇಲಾಖೆಯ ಸಸ್ಯಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡಿದ್ದು, ಅಲ್ಲಿಯೇ ಕಾರ್ಮಿಕರ ಶೆಡ್ನಲ್ಲಿ ವಾಸವಾಗಿದ್ದ ಹಾವೇರಿ ಜಿಲ್ಲೆ ಶಿಗ್ಗಾಂವಿ ಮೂಲದ ಮಹಿಳೆಯ ಎರಡೂವರೆ ವರ್ಷದ ಹೆಣ್ಣು ಮಗು ಮತ್ತು ಮತ್ತೊಬ್ಬ ಕಾರ್ಮಿಕರ ಹೆಣ್ಣುಮಗು ಅಲ್ಲಿಯೇ ಪಕ್ಕದಲ್ಲಿ ಆಟವಾಡುತ್ತಿದ್ದವು. ಸಂಜೆ ವೇಳೆಗೆ ನೋಡುವಾಗ ಒಂದು ಮಗು ಕಾಣೆಯಾಗಿತ್ತು. ಹಲವೆಡೆ ಹುಡುಕಾಟ ನಡೆಸಿ ಕಂಕನಾಡಿ ನಗರ ಠಾಣಾ ಪೊಲೀಸರಿಗೆ ದೂರು ನೀಡಿದರು.
ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಆರಂಭಿಸಿ ಲಭ್ಯ ಸಿಸಿ ಕ್ಯಾಮರಾಗಳ ಪರಿಶೀಲಿಸಿದರು.
ರೈಲ್ವೆ ನಿಲ್ದಾಣದ ಸಿಸಿ ಕ್ಯಾಮರಾವನ್ನು ಪರಿಶೀಲಿಸುವಾಗ ಓರ್ವ ವ್ಯಕ್ತಿ ತನ್ನೊಂದಿಗೆ ಮಗುವನ್ನು ಕರೆದೊಯ್ಯುವುದು ಕಂಡು ಬಂತು. ಕೂಡಲೇ ಕಾಸರಗೋಡು ಪೊಲೀಸರಿಗೆ ಮಾಹಿತಿ ನೀಡಲಾಯಿತು. ಅಲ್ಲಿಗೆ ತೆರಳಿದ ಮಂಗಳೂರಿನ ಪೊಲೀಸರು ಕಾಸರಗೋಡು ಪೊಲೀಸರ ಜೊತೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಮಗು ಸಹಿತವಾಗಿ ರಾತ್ರಿ ವಶಕ್ಕೆ ಪಡೆದಿದ್ದಾರೆ. ಮಗು ಸುರಕ್ಷಿತವಾಗಿದ್ದು, ಅದನ್ನು ಹೆತ್ತವರಿಗೆ ಒಪ್ಪಿಸಲಾಗಿದೆ.
ಆರೋಪಿ ವಿರುದ್ಧ ಅಪಹರಣ ಪ್ರಕರಣ ದಾಖಲಾಗಿದೆ. ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.