ಉಪ್ಪಿನಂಗಡಿ : ಪೊಲೀಸ್ ಠಾಣಾ ವ್ಯಾಪ್ತಿಯ ಸಿರಿಬಾಗಿಲು ಗ್ರಾಮದ ದೇರಣೆ ಎಂಬಲ್ಲಿಂದ ನಾಪತ್ತೆಯಾಗಿದ್ದ ವಿವಾಹಿತ ಮಹಿಳೆ ಮಂಗಳೂರಿನಲ್ಲಿ ಪತ್ತೆಯಾಗಿದ್ದು, ತನ್ನ ಪತಿ ಹಾಗೂ ಎಳೆ ಮಕ್ಕಳನ್ನು ತೊರೆದು ಸ್ವತಂತ್ರವಾಗಿ ಜೀವನ ನಡೆಸುವುದಾಗಿ ತಿಳಿಸಿದ್ದರಿಂದ ಪತಿ ಹಾಗೂ ಮಕ್ಕಳು ಕಂಗಾಲಾಗಿದ್ದಾರೆ.
ಪತ್ನಿ ಕಳೆದ ಆಗಸ್ಟ್ 23 ರಂದು ಪುತ್ತೂರಿನ ಸಿಟಿ ಆಸ್ಪತ್ರೆಗೆ ಹೋಗಿ ಬರುವೆನೆಂದು ಹೇಳಿ ಹೋದಾಕೆ ನಾಪತ್ತೆಯಾಗಿದ್ದಾಳೆ ಎಂದು ದೇರಣೆ ನಿವಾಸಿ ನಾರಾಯಣ ಎಂಬವರು ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಪೊಲೀಸರು ಪ್ರಕರಣವನ್ನು ದಾಖಲಿಸಿ ಶೋಧ ಕಾರ್ಯಾಚರಣೆ ನಡೆಸಿದಾಗ ನಾಪತ್ತೆಯಾದ ಮಹಿಳೆಯು ಮಂಗಳೂರಿನ ಪಿ.ಜಿ.ಯೊಂದರಲ್ಲಿ ಪತ್ತೆಯಾಗಿದ್ದು, ಆಕೆಯನ್ನು ಕರೆತಂದು ವಿಚಾರಿಸಿದಾಗ, ತನಗೆ ಗಂಡನೊಂದಿಗೆ ಜೀವನ ನಡೆಸಲು ಅಸಾಧ್ಯ. ಅದಕ್ಕಾಗಿ ಮಕ್ಕಳನ್ನು ಮತ್ತು ಪತಿಯನ್ನು ತೊರೆದು ಮಂಗಳೂರಿನಲ್ಲಿ ಉದ್ಯೋಗವೊಂದಕ್ಕೆ ಸೇರಿರುವುದಾಗಿ ತಿಳಿಸಿದ್ದರಲ್ಲದೆ, ತಾನು ಸ್ವತಂತ್ರ್ಯ ಜೀವನ ನಡೆಸುವುದಾಗಿ ತಿಳಿಸಿದ್ದರು. ಮಹಿಳೆಯ ಈ ವರ್ತನೆಯಿಂದಾಗಿ ಪತಿ ಮತ್ತು 12 ವರ್ಷ ಪ್ರಾಯದ ವಿಶೇಷ ಚೇತನ ಮಗು ಮತ್ತು ಐದರ ಪ್ರಾಯದ ಇನ್ನೊಂದು ಮಗು ಕಂಗಾಲಾಗಿದ್ದಾರೆ.