ಬೆಂಗಳೂರು : ರೇಣಕಾಸ್ವಾಮಿ ಕೊಲೆ ಪ್ರಕರಣದ ದೋಷಾರೋಪ ಪಟ್ಟಿಯನ್ನು ತನಿಖಾಧಿಕಾರಿಗಳು ಬುಧವಾರ (ಸೆ.4ರಂದು) ಕೋರ್ಟ್‌ಗೆ ಸಲ್ಲಿಸಿದ್ದಾರೆ.
ತನಿಖಾಧಿಕಾರಿ ಎಸಿಪಿ ಚಂದನ್ ಅವರ ನೇತೃತ್ವದಲ್ಲಿ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಗೆ ಸಲ್ಲಿಸಲಾಗಿದೆ. ಸುಮಾರು 3,991 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿರುವುದಾಗಿ ತಿಳಿದುಬಂದಿದೆ.
ಪ್ರಕರಣದಲ್ಲಿ ದರ್ಶನ್ ಎ2 ಆಗಿದ್ದು, ಪವಿತ್ರಾ ಗೌಡ ಎ1 ಆಗಿದ್ದಾರೆ ಎಂದು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ.
ಈ ಮೊದಲು ದರ್ಶನ್ ಅವರನ್ನು ಎ1 ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಫ್ ಎಲ್‌ನ ಕೆಲವು ವರದಿಗಳು ಬರಲು ಬಾಕಿಯಿದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಹಂತದ ಆರೋಪಪಟ್ಟಿಯನ್ನು ಸಲ್ಲಿಸಲಾಗಿದೆ ಎನ್ನಲಾಗಿದೆ.
ಕೋರ್ಟ್‌ಗೆ ಸಲ್ಲಿಕೆ ಮಾಡಿರುವ ದೋಷಾರೋಪಪಟ್ಟಿಯಲ್ಲಿ ಆರೋಪಿಗಳ ವಿರುದ್ಧ ಹಲವು ಸಾಕ್ಷ್ಯಗಳನ್ನು ಉಲ್ಲೇಖ ಮಾಡಲಾಗಿದೆ. 3 ಪ್ರತ್ಯಕ್ಷ ಸಾಕ್ಷಿಗಳಿದ್ದು, ಎಫ್ಎಸ್ಎಲ್ ಮತ್ತು ಸಿಎಫ್ಎಸ್ಎಲ್ನಿಂದ 8 ವರದಿಗಳಿವೆ.
27 ಜನರ 164ರ ಅಡಿಯಲ್ಲಿ ಹೇಳಿಕೆ, 161 ಅಡಿಯಲ್ಲಿ 70 ಜನರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಜೊತೆಗೆ 59 ಜನ ಸಮಕ್ಷಮದಲ್ಲಿ ಮಹಜರು ಮಾಡಲಾಗಿದೆ. 8 ವೈದ್ಯರು, ತಹಶೀಲ್ದಾರ್ ಸೇರಿದಂತೆ ಸರ್ಕಾರಿ ಅಧಿಕಾರಿಗಳ ಸಾಕ್ಷಿ ಕೂಡ ಉಲ್ಲೇಖ ಮಾಡಲಾಗಿದೆ ಎಂದು ತಿಳಿದು ಬಂದಿದೆ.



























