ಬೆಂಗಳೂರು : ಮೊನ್ನೆ ಅಷ್ಟೇ ಉದ್ಘಾಟನೆಗೊಂಡಿರುವ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆಗೆ ಕೇಂದ್ರ ಸರ್ಕಾರ ತಕರಾರು ಎತ್ತಿದೆ.
ಎತ್ತಿನಹೊಳೆ ಯೋಜನೆಯಿಂದ ಪಶ್ಚಿಮ ಘಟ್ಟಕ್ಕೆ ಹಾನಿಯಾದ ಬಗ್ಗೆ ವರದಿ ಹಿನ್ನೆಲೆಯಲ್ಲಿ ಯೋಜನೆಯ ಕಾರ್ಯ ಸಾಧ್ಯತೆ ವರದಿ ಸಲ್ಲಿಸುವಂತೆ ಕೇಂದ್ರ ಅರಣ್ಯ, ಪರಿಸರ ಮತ್ತು ತಾಪಮಾನ ಸಚಿವಾಲಯ, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕಂಚಿಗಾನಹಳ್ಳಿಯ ಸರ್ವೆ ಸಂಖ್ಯೆ 2,30 ಹಾಗೂ ಯಲ್ಲಾಪುರ ಗ್ರಾಮದ ಸರ್ವೆ ಸಂಖ್ಯೆ 34,35 ಮತ್ತು 36ರ ಅರಣ್ಯ ಬಳಕೆ ಬಗ್ಗೆ ವರದಿ ನೀಡಿವಂತೆ ನೋಟಿಸ್ನಲ್ಲಿ ತಾಕೀತು ಮಾಡಿದೆ.
2020ರಲ್ಲಿ 26 ಎಕರೆ ಅರಣ್ಯ ಬಳಕೆಗೆ ವಿಶ್ವೇಶ್ವರ ಜಲ ನಿಗಮವು ಪ್ರಸ್ತಾವನೆ ಸಲ್ಲಿಸಿದ್ದು, ಇದಕ್ಕೆ ಒಪ್ಪಿಗೆ ನೀಡುವಂತೆ ರಾಜ್ಯ ಸರ್ಕಾರವು ಸಹ 2024ರ ಜುಲೈನಲ್ಲಿ ಪತ್ರ ಬರೆದಿತ್ತು. ಈ ಪ್ರಸ್ತಾವದ ಕುರಿತು ಸ್ಪಷ್ಟನೆ ಹಾಗೂ ಹೆಚ್ಚುವರಿ ಮಾಹಿತಿ ಒದಗಿಸುವಂತೆ ರಾಜ್ಯ ಅರಣ್ಯ ಇಲಾಖೆಗೆ ಕೇಂದ್ರ ಸಚಿವಾಲಯ ಸೂಚಿಸಿದೆ.
ಪರ-ವಿರೋಧಗಳ ಮಧ್ಯ ಬಹುನಿರೀಕ್ಷಿತ ಎತ್ತಿನಹೊಳೆ ಯೋಜನೆಯ ಮೊದಲ ಹಂತಕ್ಕೆ ಸಿಎಂ ಸಿದ್ದರಾಮಯ್ಯ ಶುಕ್ರವಾರ ಚಾಲನೆ ನೀಡಿದ್ದರು. ಸಕಲೇಶಪುರ ತಾಲೂಕಿನ ದೊಡ್ಡನಾಗರ ಬಳಿ ಯೋಜನೆ ಉದ್ಘಾಟನೆ ಮಾಡಲಾಗಿತ್ತು. ಟೇಪ್ ಕತ್ತರಿಸುವ ಮೂಲಕ ಉದ್ಘಾಟನೆ ನೆರವೇರಿಸಿದ ಸಿಎಂ, ದೊಡ್ಡನಾಗರದ 9ನೇ ಪಂಪ್ ಹೌಸ್ನಲ್ಲಿ ಕಂಪ್ಯೂಟರ್ ಮೂಲಕ ಮೋಟರ್ ಆನ್ ಮಾಡಿದ್ದರು. ಇನ್ನು ಉದ್ಘಾಟನೆಗೂ ಒಂದು ದಿನ ಮೊದಲೇ ಅಂದರೆ ಸೆ.5ರಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಸ್ಥಳಕ್ಕೆ ಹೋಗಿ ಪೂಜೆ- ಹೋಮ ಹವನಗಳನ್ನು ಮಾಡಿದ್ದರು.
ಏನಿದು ಯೋಜನೆ?
ಹಾಸನ ಜಿಲ್ಲೆಯ ಸಕಲೇಶಫುರ ತಾಲೂಕಿನ ವ್ಯಾಪ್ತಿಯ ಪಶ್ಚಿಮಘಟ್ಟದಲ್ಲಿ ಹುಟ್ಟಿ ಹರಿಯುವ ಎತ್ತಿನಹೊಳೆ ಹಾಗೂ ಸುತ್ತಮುತ್ತಲ ಹಳ್ಳಗಳಿಂದ ನೀರನ್ನು ಮೆಲೆತ್ತಿ ಬೆಂಗಳೂರು ಗ್ರಾಮಾಂತರ ಸೇರಿದಂತೆ ಬಯಲು ಸೀಮೆಯ 7 ಜಿಲ್ಲೆಗಳಿಗೆ ಪೂರೈಸುವುದಕ್ಕೆ ಸಂಬಂಧಿಸಿದ ಯೋಜನೆ ಇದಾಗಿದೆ.
ಪಶ್ಚಿಮಘಟ್ಟದಲ್ಲಿ ಹರಿಯುವ ಎತ್ತಿನಹೊಳೆ ಭಾಗದ ನೀರು ಹರಿದು ಸಮುದ್ರ ಸೇರುವುದನ್ನು ತಡೆದು 24 ಟಿಎಂಸಿ ನೀರನ್ನು ನದಿಗೆ ವಿರುದ್ಧವಾಗಿ ಪೈಪ್ಲೈನ್ ಹಾಗೂ ಕಾಲುವೆ ಮೂಲಕ ಹರಿಸಿ ಬಯಲು ಸೀಮೆ ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಒದಗಿಸಲು ಹಮ್ಮಿಕೊಂಡಿರುವ ಯೋಜನೆಯಾಗಿದ್ದು, 2014ರಲ್ಲಿ 8500 ಕೋಟಿ ರೂಪಾಯಿ ವೆಚ್ಚದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ಯೋಜನೆಯ ವೆಚ್ಚ ಇದೀಗ 23,251 ಕೋಟಿ ರೂ.ಗೆ ಮುಟ್ಟಿದೆ.



























