ಬೆಂಗಳೂರು : ಲೋಕಸಭೆ ಚುನಾವಣೆ ಟಿಕೆಟ್ ವಿಚಾರವಾಗಿ ಕರ್ನಾಟಕ ಬಿಜೆಪಿಯಲ್ಲಿ ಮೂಡಿದ್ದ ಬಿರುಕು ಈಗ ದೊಡ್ಡದಾಗಿದೆ. ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುವುದು ಮೇಲ್ನೋಟಕ್ಕೆ ಕಾಣುತ್ತಿದೆ. ನಾಯಕರ ಮಧ್ಯೆಯೇ ಅಸಮಧಾನ ಮೂಡಿದೆ. ರಾಜ್ಯ ಬಿಜೆಪಿಯಲ್ಲಿ ಮೂಡಿರುವ ಬಂಡಾಯವನ್ನು ಶಮನ ಮಾಡಲು ರಾಷ್ಟ್ರೀಯ ಸ್ವಯಂಸೇವಕ ಸಂಘ ಮೈದಾನಕ್ಕೆ ಇಳಿಯಲಿದೆ. ಗುರುವಾರ (ಸೆಪ್ಟೆಂಬರ್ 12) ರಂದು ರಾಜ್ಯ ಬಿಜೆಪಿ ಮತ್ತು ಆರ್ಎಸ್ಎಸ್ ನಾಯಕರ ನಡುವೆ ಸಭೆ ನಡೆಯಲಿದೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.
ಈ ಸಭೆಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ಗೋಕಾಕ್ ಶಾಸಕ ರಮೇಶ ಜಾರಕಿಹೊಳಿ ಮತ್ತು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮತ್ತು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬಣಕ್ಕೆ ಆಹ್ವಾನ ನೀಡಲಾಗಿದೆ. ಸಭೆಗೆ ಒಟ್ಟು 40ಕ್ಕೂ ಅಧಿಕ ನಾಯಕರನ್ನು ಆಹ್ವಾನಿಸಲಾಗಿದೆ.
ಕೆಲ ನಾಯಕರು ನಮಗೆ ಯಾರೂ ಆಹ್ವಾನ ನೀಡಿಲ್ಲ ಎನ್ನುತ್ತಿದ್ದಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಟೀಮ್ ಈಗಾಗಲೇ ರಾಷ್ಟ್ರೀಯ ಮಟ್ಟದ ಹಿರಿಯ ಆರ್ಎಸ್ಎಸ್ ನಾಯಕರನ್ನು ಭೇಟಿಯಾಗಿದೆ. ಈ ವೇಳೆ ಆರ್ಎಸ್ಎಸ್ ನಾಯಕರು ಒಂದು ತಿಂಗಳು ಸುಮ್ಮನಿರಿ, ಎಲ್ಲ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ. ಇದಾದ ಬಳಿಕ ಬಸನಗೌಡ ಪಾಟೀಲ್ ಯತ್ನಾಳ ಟೀಮ್ ಬಿಎಲ್ ಸಂತೋಷರನ್ನು ಸಹ ಭೇಟಿಯಾಗಿತ್ತು. ಈ ಸಂದರ್ಭದಲ್ಲಿಯೂ ಬಿಎಲ್ ಸಂತೋಷ್ ಕೆಲ ದಿನಗಳ ಕಾಲ ಶಾಂತವಾಗಿ ಇರುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ವಿಧಾನಸಭೆ ಚುನಾವಣೆ ಸೋಲಿನ ಬಳಿಕ ರಾಜ್ಯ ಬಿಜೆಪಿಯಲ್ಲಿ ನಾಯಕರ ನಡುವೆ ಬಿರುಕು ಮೂಡಿತು. ನಂತರ, ಬಿವೈ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ ಬಳಿಕ ಕೆಲ ಹಿರಿಯ ನಾಯಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಮುಲಾಮು ಹಚ್ಚಲಾಯ್ತು. ಆದರೂ, ಪೂರ್ಣ ಪ್ರಮಾಣದಲ್ಲಿ ಗಾಯ ವಾಸಿಯಾಗಲಿಲ್ಲ.
ಸಭೆಯಲ್ಲಿ ಏನು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬುವುದನ್ನು ಕಾದು ನೋಡಬೇಕು.