ಉಪ್ಪಿನಂಗಡಿ : ಶಾಲೆಯಲ್ಲಿ ವಿದ್ಯಾರ್ಥಿಯೋರ್ವನ ಮೇಲೆ ದ್ವೇಷ ಭಾವನೆಯಿಂದ ಸತತ ಮೂರು ದಿನ ಶಿಕ್ಷಕರೋರ್ವರು ಬೆತ್ತದಿಂದ ಹಲ್ಲೆ ನಡೆಸಿರುವ ಆರೋಪ ವ್ಯಕ್ತವಾಗಿದೆ.
ಹಲ್ಲೆಗೆ ಒಳಗಾದ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಶಿಕ್ಷಕನ ವಿರುದ್ದ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕು ಉರುವಾಲು ನಿವಾಸಿಯಾಗಿದ್ದು, ಪದ್ಮುಂಜ ಸರಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಹಲ್ಲೆಗೊಳಗಾಗಿದ್ದು, ಇಂಗ್ಲೀಷ್ ಶಿಕ್ಷಕ ಅನಂತ ಕುಮಾರ್ ಹಲ್ಲೆ ನಡೆಸಿದವರು ಎಂದು ಆಪಾದಿಸಲಾಗಿದೆ.
ಶಿಕ್ಷಕ ವಿದ್ಯಾರ್ಥಿಗೆ ಸೆ. 9, 10, 11 ರಂದು ಬೆತ್ತದಿಂದ ಹಲ್ಲೆ ನಡೆಸಿದ್ದು, ಈ ವಿಚಾರವನ್ನು ವಿದ್ಯಾರ್ಥಿ ಯಾರಿಗೂ ತಿಳಿಸದೆ ಸುಮ್ಮನಿದ್ದು, ಬಳಿಕ ನೋವು ಜಾಸ್ತಿಯಾದ ಕಾರಣ ಮನೆಯವರಿಗೆ ಬರೆ ವಿಚಾರ ತಿಳಿಸಿದ್ದರೆನ್ನಲಾಗಿದೆ. ಆ ಬಳಿಕ ಮನೆಯವರು ವಿದ್ಯಾರ್ಥಿಯನ್ನು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಿ, ಶಿಕ್ಷಕನ ವಿರುದ್ದ ದೂರು ನೀಡಿದ್ದಾರೆ.
ತನ್ನ ಮೇಲೆ ದೌರ್ಜನ್ಯವೆಸಗಲಾಗಿದೆ ಎಂದು ಆರೋಪಿಸಿ ಶಿಕ್ಷಕ ಅನಂತ ಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ಪೊಲೀಸರಿಗೆ ಮಾಹಿತಿ ಬಂದಿದ್ದು, ಪ್ರಕರಣದ ಸತ್ಯಾಸತ್ಯತೆ ತನಿಖೆಯ ನಂತರವಷ್ಟೇ ತಿಳಿಯಬೇಕಿದೆ.