ಉಡುಪಿ : ಹೆಬ್ರಿ ತಾಲೂಕಿನ ಚಕ್ಕರಮಕ್ಕಿ ಶೇಡಿಮನೆ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಮೂರೂವರೆ ವರ್ಷದ ಮಗು ಮೇಲೆ ತೀವ್ರವಾಗಿ ಹಲ್ಲೆ ಮಾಡಲಾಗಿದೆ. ಇದರಿಂದ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿದೆ. ಮೈ ಹುಷಾರಿಲ್ಲ ಅಂತ ಮಗುವಿನ ಪೋಷಕರು ಗುರುವಾರ ಬೆಳಿಗ್ಗೆ ಉಡುಪಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಮಗುವಿಗೆ ಚಿಕಿತ್ಸೆ ನೀಡುವ ವೇಳೆ ವೈದ್ಯರು ಆತನ ಮೈ ಮೇಲಿನ ಗಾಯದ ಗುರುತುಗಳನ್ನು ಕಂಡಿದ್ದಾರೆ.
ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು, ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಕೆಎಂಸಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಈ ವಿಚಾರವನ್ನು ವೈದ್ಯರು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಯ ಗಮನಕ್ಕೆ ತಂದಿದ್ದಾರೆ. ಬಳಿಕ, ಡಿಹೆಚ್ಒ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ವಿಚಾರ ತಿಳಿಸಿದ್ದಾರೆ. ವಿಚಾರ ತಿಳಿದ ಕೂಡಲೇ ಜಿಲ್ಲಾ ಮಕ್ಕಳ ರಕ್ಷಣಾ ಘಟಕದವರು ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರಿಂದ ಮಾಹಿತಿ ಪಡೆದಿದ್ದಾರೆ. ನಂತರ, ಅಮಾವಾಸ್ಯೆಬೈಲು ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.