ಮಂಗಳೂರು : ಮುಸ್ಲಿಂ ಮತ್ತು ಹಿಂದೂ ನಾಯಕರ ಪ್ರಚೋದನಾಕಾರಿ ಹೇಳಿಕೆಗಳಿಂದ ಮತ್ತು ನಡೆಗಳಿಂದ ಉದ್ವಿಗ್ನಗೊಂಡಿದ್ದ ಬಿಸಿ ರೋಡ್ನಲ್ಲಿ ಶಾಂತಿ ನೆಲೆಸುವಂತೆ ಮಾಡುವಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಸೋಮವಾರ ಬೆಳಗ್ಗೆ ಯಶಸ್ವಿಯಾಗಿದ್ದರು. ಆದರೆ, ಈದ್ ಮಿಲಾದ್ ಪ್ರಯುಕ್ತ ಮುಸ್ಲಿಂ ಯುವಕರ ಬೈಕ್ ರ‍್ಯಾಲಿಗೆ ಅವಕಾಶ ಕೊಟ್ಟಿದ್ದು ಮತ್ತೆ ಪರಿಸ್ಥಿತಿ ಹದಗೆಡುವಂತೆ ಮಾಡಿದೆ ಎಂದು ತಿಳಿದು ಬಂದಿದೆ.
ಮುಸ್ಲಿಂ ಬೈಕ್ ರ‍್ಯಾಲಿಗೆ ಅವಕಾಶ ನೀಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ನಮಗೆ ಮೆರವಣಿಗೆಗೆ ಅನುಮತಿ ನೀಡಿಲ್ಲ. ಹೀಗಿರುವಾಗ ಅವರಿಗೆ (ಮುಸ್ಲಿಮರಿಗೆ) ಹೇಗೆ ಅನುಮತಿ ಕೊಟ್ಟಿರಿ ಎಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಪೊಲೀಸರನ್ನು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ಪೊಲೀಸರ ವಿರುದ್ಧ ಹಿಂದೂ ಸಂಘಟನೆ ಕಾರ್ಯಕರ್ತರು ಕಿಡಿ ಕಾರಿದ್ದು, ನಾವು ಸಂಜೆವರೆಗೂ ಇಲ್ಲಿಂದ ಹೋಗುವುದಿಲ್ಲ. ಇಲ್ಲೇ ಇರುತ್ತೇವೆ ಎಂದು ಪಟ್ಟುಹಿಡಿದಿದ್ದಾರೆ. ಮುಸ್ಲಿಮರಿಗೆ ಏಕಾಏಕಿ ಬೈಕ್ ರ‍್ಯಾಲಿಗೆ ಅವಕಾಶ ನೀಡಿದ್ದೀರಿ. ನಮಗೂ ರ‍್ಯಾಲಿಗೆ ಅವಕಾಶ ನೀಡಿ ಎಂದು ಹಿಂದೂ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.