ಬೆಂಗಳೂರು : ಟೊಮೆಟೋ ಬೆಳೆಯಿಂದ ನಷ್ಟ ಆಗಿದ್ದಕ್ಕೆ ಲ್ಯಾಪ್ಟಾಪ್ ಕಳ್ಳತನ ಮಾಡಿ ಮಾರುತ್ತಿದ್ದ ಟೆಕ್ಕಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ಮುರುಗೇಶ ಎಂದು ಗುರುತಿಸಲಾಗಿದ್ದು, ಸಿಸ್ಟಮ್ ಆಡ್ಮಿನ್ ಆಗಿ ಕೆಲಸ ಮಾಡುತ್ತಿದ್ದ. ಜೊತೆಗೆ ಕೃಷಿಯಲ್ಲಿ ತೊಡಗಿಕೊಂಡಿದ್ದನು ಎನ್ನಲಾಗಿದೆ.
ಮುರುಗೇಶ 6 ಎಕರೆಯಲ್ಲಿ ಟೊಮೆಟೋ ಬೆಳೆದಿದ್ದ. ಅದಕ್ಕಾಗಿ ಹೊಸೂರಿನಲ್ಲಿ ಸಾಲ ಮಾಡಿದ್ದ. ಆದರೆ ಬೆಳೆ ಕೈಕೊಟ್ಟ ಕಾರಣ ಸಾಕಷ್ಟು ನಷ್ಟವನ್ನು ಅನುಭವಿಸಿದ್ದ. ಸಾಲ ತೀರಿಸಲಾಗದೇ ಕಳೆದ ಆರು ತಿಂಗಳಿನಿಂದ ಮುರುಗೇಶ ಲ್ಯಾಪ್ಟಾಪ್ ಸರ್ವಿಸ್, ರಿಪೇರಿ ಮಾಡುವ ಕೆಲಸದಲ್ಲಿ ತೊಡಗಿದ್ದ. ಹೀಗೆ ಕೆಲಸದ ನೆಪ ಹೂಡಿ ಹಲವಾರು ಲ್ಯಾಪ್ಟಾಪ್ ಕದ್ದಿದ್ದ.
ತಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿಯೂ ಇದೇ ನೆಪ ಹೇಳಿ ಲ್ಯಾಪ್ಟಾಪ್ನ್ನು ಕಳ್ಳತನ ಮಾಡಿದ್ದ. ಈ ಬಗ್ಗೆ ಕಂಪನಿಯವರು ಪ್ರಶ್ನೆ ಮಾಡಿದಾಗ ರಜೆ ಹಾಕಿ ಪಾರಾಗಿದ್ದ. ಜೊತೆಗೆ ಕದ್ದ ಲ್ಯಾಪ್ಟಾಪ್ಗಳನ್ನು ಹೊಸೂರಿನಲ್ಲಿ ಮಾರಾಟ ಮಾಡಿದ್ದ. ಸದ್ಯ ಟೆಕ್ಕಿ ಮುರುಗೇಶನನ್ನು ಬಂಧಿಸಲಾಗಿದ್ದು, 22 ಲಕ್ಷ ಮೌಲ್ಯದ 50 ಲ್ಯಾಪ್ಟಾಪ್ಗಳನ್ನು ವಶಕ್ಕೆ ಪಡೆಯಲಾಗಿದೆ. ವೈಟ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.