ಮಧ್ಯಪ್ರದೇಶ : ಐದೈದು ಮದುವೆಯಾಗಿ ನಾನಿನ್ನು ಬ್ರಹ್ಮಚಾರಿ ಎಂದು ಹೇಳುತ್ತಾ ಓಡಾಡುತ್ತಿದ್ದ ಸಾಫ್ಟ್ವೇರ್ ಇಂಜಿನಿಯರ್ ವಿರುದ್ಧ ದೂರು ದಾಖಲಾಗಿದೆ. ಮಧ್ಯಪ್ರದೇಶದಲ್ಲಿ ಈ ಘಟನೆ ನಡೆದಿದೆ.
ರುಸ್ತುಂ ಸಿಂಗ್ ಶೇಖರ್ ಇಂಜಿನಿಯರ್ ಆಗಿದ್ದು 2018ರ ಮಾರ್ಚ್ 13ರಂದು ಮೊದಲ ಮದುವೆಯಾಗಿದ್ದ. ಮದುವೆಯಾದ ಬಳಿಕ ಕೆಲಸದ ನಿಮಿತ್ತ ಹೊರಗಡೆ ಹೋದವನು ಬೇರೆ ಬೇರೆ ಕಡೆ ಬೇರೆ ಮಹಿಳೆಯರನ್ನು ಮದುವೆಯಾಗಿದ್ದ.
ಆತನ ಮೊದಲ ಪತ್ನಿ ಗ್ವಾಲಿಯರ್ ಎಸ್ಪಿಗೆ ಬಂದು ದೂರು ನೀಡಿದ್ದಾಳೆ. ಆಕೆ ಈಗಾಗಲೇ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದರು, ಆದರೆ ಇದುವರೆಗೆ ಯಾವುದೇ ಬಂಧನವಾಗಿಲ್ಲ.
ಆತ ದೇಶದಿಂದ ಪಲಾಯನ ಮಾಡಲು ಯೋಜಿಸುತ್ತಿದ್ದಾನೆ ಎಂದು ಅನುಮಾನ ವ್ಯಕ್ತಪಡಿಸಿರುವ ಪತ್ನಿ, ಆತನ ಪಾಸ್ಪೋರ್ಟ್ ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಮಹಿಳಾ ಅಪರಾಧ ವಿಭಾಗದ ಡಿಎಸ್ಪಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಆತ ಮನೆಗೆ ಸರಿಯಾಗಿ ಬಾರದಿರುವುದರ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪತ್ನಿ ಗೂಢಾಚಾರಿಕೆ ಮಾಡಿದಾಗ ಆತ ಬೇರೆ ಬೇರೆ ಮಹಿಳೆಯರನ್ನು ಮದುವೆಯಾಗಿರುವುದನ್ನು ಕಂಡುಕೊಂಡಿದ್ದರು.
ಪತ್ನಿ 2022ರಲ್ಲಿ ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ದಾಖಲಿಸಿದ್ದರು, ಅದು ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ವಾರಂಟ್ ಜಾರಿಯಾಗಿ ಎರಡು ವರ್ಷ ಕಳೆದರೂ ಪೊಲೀಸರು ಇನ್ನೂ ಬಂಧಿಸಿಲ್ಲ. ವರದಕ್ಷಿಣೆ ಕಿರುಕುಳವಲ್ಲದೆ ಜೀವನಾಂಶಕ್ಕಾಗಿ ಕೇಸ್ ಹಾಕಿದ್ದರೂ ನ್ಯಾಯಾಲಯಕ್ಕೆ ಹಾಜರಾಗುತ್ತಿಲ್ಲ.