ಮಂಡ್ಯ : ಜಿಲ್ಲೆಯ ನಾಗಮಂಗಲದಲ್ಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ 52 ಆರೋಪಿಗಳ ಬಂಧನವಾಗಿದೆ. ಬಂಧನದ ಭೀತಿಯಿಂದ ಕೆಲ ಯುವಕರು ಊರು ತೊರೆದಿದ್ದು, ಮನೆ ಮಂದಿ ಕಣ್ಣೀರು ಹಾಕುತ್ತಿದ್ದಾರೆ. ಗಲಭೆಗೆ ಕಾರಣವಾದ ಬದ್ರಿಕೊಪ್ಪಲು ಗ್ರಾಮದ 13 ಮಂದಿ ಅರೆಸ್ಟ್ ಆಗಿದ್ದಾರೆ. ಇದೀಗ ಬಂಧನ ಭೀತಿಯಲ್ಲಿ ಗ್ರಾಮ ತೊರೆದಿದ್ದ ಯುವಕನೋರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬ್ರೈನ್ ಸ್ಟ್ರೋಕ್ನಿಂದ ಕಿರಣ್(23) ಮೃತಪಟ್ಟಿದ್ದಾರೆ.
ನಾಗಮಂಗಲ ತಾಲೂಕಿನ ಬದ್ರಿಕೊಪ್ಪಲು ಗ್ರಾಮದ ನಿವಾಸಿ ಕಿರಣ್ ಸೆಪ್ಟೆಂಬರ್ 11ರ ರಾತ್ರಿ ಗಲಭೆ ನಂತರ ಗ್ರಾಮ ತೊರೆದಿದ್ದ. ಆದರೆ ನಿನ್ನೆ ಕಿರಣ್ಗೆ ಬ್ರೈನ್ ಸ್ಟ್ರೋಕ್ ಆಗಿ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೆ ಇಂದು ಕೊನೆಯುಸಿರೆಳೆದಿದ್ದಾರೆ.
ಕಿರಣ್ ತಂದೆ ಕುಮಾರ್ರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ನಾಗಮಂಗಲ ಗಲಭೆ ಕೇಸ್ನಲ್ಲಿ ಕುಮಾರ್ 17ನೇ ಆರೋಪಿಯಾಗಿದ್ದಾರೆ. ಸದ್ಯ ಮಂಡ್ಯ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಶವ ಸ್ಥಳಾಂತರ ಮಾಡಲಾಗಿದ್ದು, ಇದೀಗ ಕಿರಣ್ ಮೃತದೇಹ ಗ್ರಾಮಕ್ಕೆ ಆಗಮಿಸಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಪ್ರಕರಣ ಸಂಬಂಧ ಬದ್ರಿಕೊಪ್ಪಲು ಗ್ರಾಮದ ಹಲವರ ಬಂಧನವಾಗಿದ್ದರೆ, ಮತ್ತೊಂದು ಕಡೆ 25ಕ್ಕೂ ಹೆಚ್ಚು ಯುವಕರು ಗ್ರಾಮ ತೊರೆದಿದ್ದಾರೆ. ಹೀಗಾಗಿ ಯುವಕರ ಕುಟುಂಬಸ್ಥರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಕದಬಹಳ್ಳಿ ಗ್ರಾಮದ ರೈತರು ಗ್ರಾಮಕ್ಕೆ ಭೇಟಿ ನೀಡಿ 20ಕ್ಕೂ ಹೆಚ್ಚು ಕುಟುಂಬಗಳಿಗೆ ತಮ್ಮ ಕೈಲಾದ ಮಟ್ಟಿಗೆ ಆರ್ಥಿಕ ಸಹಾಯ ಮಾಡಿದ್ದಾರೆ. ಕುಟುಂಬಗಳಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.