ಪ್ರವಾಸಿ ಸ್ಥಳಗಳಲ್ಲಿ, ದೇವಾಲಯದ ಹೊರ ಭಾಗದಲ್ಲಿ, ಬಸ್ಸ್ಟಾಂಡ್ ಇತ್ಯಾದಿ ಜನಜಂಗುಳಿ ಪ್ರದೇಶಗಳಲ್ಲಿ ಭಿಕ್ಷುಕರು ಕೈಯಲ್ಲಿ ಒಂದು ತಟ್ಟೆ ಹಿಡಿದು ನನಗೆ ಕೈಯಿಲ್ಲ, ಒಂದು ಕಾಲಿಲ್ಲ, ಕಣ್ಣು ಕಾಣಿಸೊಲ್ಲ, ಊಟ ಮಾಡೋಕೆ ದುಡ್ಡು ಕೊಡಿ ಅಮ್ಮಾ ಎಂದು ಹೇಳಿ ಭಿಕ್ಷೆ ಬೇಡುತ್ತಿರುತ್ತಾರೆ. ಇನ್ನೂ ಕೆಲವರು ಕೈ ಕಾಲು ಸರಿ ಇದ್ರೂ ಕೂಡಾ ಮೈ ಬಗ್ಗಿಸಿ ದುಡಿಯಲು ಉದಾಸೀನತೆಯನ್ನು ತೋರಿ ಭಿಕ್ಷೆ ಬೇಡುವವರೂ ಇದ್ದಾರೆ. ಅದೇ ರೀತಿ ಇಲ್ಲೊಬ್ಬ ಭಿಕ್ಷುಕ ಕೂಡಾ ಎರಡೂ ಕೈಗಳು ಸರಿ ಇದ್ರೂ ಕೂಡಾ ಕೈಗಳಿಲ್ಲದ ಅಂಗವಿಕಲನಂತೆ ನಟಿಸಿ ಭಿಕ್ಷೆ ಬೇಡಿದ್ದಾನೆ.
ಕ್ಯಾಮರಾ ಕಣ್ಣಲ್ಲಿ ಈತ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಈ ವೀಡಿಯೋ ವೈರಲ್ ಆಗುತ್ತಿದೆ.
ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ಪ್ರವಾಸಿ ತಾಣವೊಂದರ ಬಳಿ ವ್ಯಕ್ತಿಯೊಬ್ಬ ಕೈಗಳೆರಡು ಇದ್ರೂ ಕೂಡಾ ತಾನೊಬ್ಬ ಅಂಗವಿಕಲನಂತೆ ನಟಿಸಿ ಭಿಕ್ಷೆ ಬೇಡುವುದನ್ನೇ ವೃತ್ತಿ ಮಾಡಿಕೊಂಡಿದ್ದಾನೆ. ತನ್ನ ಎರಡೂ ಕೈಗಳನ್ನು ಹರಕಲು ಶರ್ಟ್ ಒಳಗೆ ಬಚ್ಚಿಟ್ಟು ಕೈಗಳಿಲ್ಲದಿರುವಂತೆ ನಟಿಸಿ ಭಿಕ್ಷೆ ಬೇಡಿದ್ದು, ಹೀಗೆ ತಟ್ಟೆಗೆ ಬಂದ ಹಣವನ್ನು ಮೆಲ್ಲಗೆ ಕೈಯಲ್ಲಿ ತೆಗೆದು ಶರ್ಟ್ ಜೇಬಿಗೆ ತುಂಬಿಸುವ ಸಮಯದಲ್ಲಿ ಈತನ ಈ ಕಳ್ಳಾಟವನ್ನು ಯಾರೋ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.