ಇತ್ತೀಚಿಗಂತೂ ರೀಲ್ಸ್, ವ್ಲಾಗ್ಸ್ ಕ್ರೇಜ್ ಬಹಳನೇ ಹೆಚ್ಚಾಗಿದೆ. ಅದರಲ್ಲೂ ಕೆಲವರಂತೂ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವ ಸಲುವಾಗಿ ಇತರರಿಗೆ ಪ್ರಾಂಕ್ ಮಾಡುವಂತಹ ಅಥವಾ ಇತರರಿಗೆ ತೊಂದರೆ ಕೊಟ್ಟು ಮಜಾ ತೆಗೆದುಕೊಳ್ಳುವಂತಹ ಹುಚ್ಚಾಟದ ವೀಡಿಯೋಗಳನ್ನು ಮಾಡುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವಕ ಕೂಡಾ ಇಂತಹ ದುಸ್ಸಾಹಸಕ್ಕೆ ಕೈ ಹಾಕಿದ್ದು, ಹೈವೇ ರಸ್ತೆಯಲ್ಲಿ ಸೈಕಲ್‌ನಲ್ಲಿ ತನ್ನ ಪಾಡಿಗೆ ಹೋಗುತ್ತಿದ್ದ ವೃದ್ಧರೊಬ್ಬರ ಹಿಂದಿನಿಂದ ಬೈಕ್‌ನಲ್ಲಿ ಬಂದ ಯುವಕನೊಬ್ಬ ನಡು ರಸ್ತೆಯಲ್ಲಿಯೇ ಆ ವ್ಯಕ್ತಿಯ ಮುಖಕ್ಕೆ ಸ್ಪ್ರೇ ಎರಚಿದ್ದಾನೆ.
ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಪೊಲೀಸರು ಆತನನ್ನು ಕಸ್ಟಡಿಗೆ ತೆಗೆದುಕೊಂಡು ಸರಿಯಾಗಿ ಸನ್ಮಾನ ಮಾಡಿದ್ದಾರೆ.
ಉತ್ತರ ಪ್ರದೇಶದ ಝಾನ್ಸಿ ನಗರದಲ್ಲಿ ನಡೆದಿದ್ದು, ಯುವಕನೊಬ್ಬ ರೀಲ್ಸ್ ವೀಡಿಯೋ ಮಾಡುವ ಸಲುವಾಗಿ ರಸ್ತೆಯಲ್ಲಿ ಸೈಕಲ್ ತುಳಿಯುತ್ತಾ ಹೋಗುತ್ತಿದ್ದ ಅಮಾಯಕ ವ್ಯಕ್ತಿಯ ಮೇಲೆ ಬಿಳಿ ಬಣ್ಣದ ಸ್ಪ್ರೇ ಎರಚಿ ಹುಚ್ಚಾಟ ಮೆರೆದಿದ್ದಾನೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ತಕ್ಷಣ ಕಾರ್ಯನಿರತರಾದ ಝಾನ್ಸಿ ಪೊಲೀಸರು ಆ ಯುವಕನ್ನು ಬಂಧಿಸಿದ್ದಾರೆ.
ಆರೋಪಿಯನ್ನು ವಿನಯ್ ಯಾದವ್ ಎಂದು ಗುರುತಿಸಲಾಗಿದೆ. ಇದೇ ರೀತಿಯ ಹುಚ್ಚಾಟದ ವೀಡಿಯೋಗಳನ್ನು ಹರಿಬಿಡುವ ಈತನಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಕೂಡಾ ಇದ್ದಾರೆ. ಇದೀಗ ತನ್ನ ಮಿತಿಮೀರಿತ ವರ್ತನೆಯಿಂದಲೇ ಪೊಲೀಸರ ಅತಿಥಿಯಾಗಿದ್ದಾನೆ.


























