ಉತ್ತರ ಕನ್ನಡ : ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಜನ ಮಣ್ಣಿನಲ್ಲಿ ಕೊಚ್ಚಿ ಹೋಗಿದ್ದರು. ಅದರಲ್ಲಿ 8 ಜನರನ್ನು ಪತ್ತೆ ಮಾಡಲಾಗಿತ್ತು. ಇನ್ನುಳಿದ ಕೇರಳ ಮೂಲದ ಲಾರಿ ಚಾಲಕ ಅರ್ಜುನ್, ಶಿರೂರಿನ ಲೋಕೇಶ್ ನಾಯ್ಕ ಹಾಗೂ ಜಗನ್ನಾಥ ನಾಯ್ಕ ಎಂಬುವವರಿಗಾಗಿ ಹುಡುಕಾಟ ನಡೆಸಲಾಗಿತ್ತು. ಇದೀಗ ಕಣ್ಮರೆಯಾಗಿದ್ದ ಮೂವರ ಪೈಕಿ ಎರಡು ಮೃತದೇಹ ಪತ್ತೆಯಾಗಿದೆ.
ಕೇರಳ ಮೂಲದ ಚಾಲಕ ಅರ್ಜುನ್ ಓಡಿಸುತ್ತಿದ್ದ ಲಾರಿ ಕೂಡ ಪತ್ತೆಯಾಗಿದ್ದು, ಲಾರಿಯಲ್ಲಿಯೇ ಅರ್ಜುನ ಮೃತದೇಹವಿದೆ. ಆದರೆ, ಸಿಕ್ಕಿರುವ ಇನ್ನೊಂದು ಮೃತದೇಹ ಯಾರದ್ದು ಎಂಬುವುದು ಇನ್ನಷ್ಟೇ ದೃಢವಾಗಬೇಕಿದೆ.
ಗಂಗಾವಳಿ ನದಿಯಿಂದ ಲಾರಿ ಹಾಗೂ ಸಿಕ್ಕಿರುವ ಮೃತದೇಹವನ್ನು ಎತ್ತುವ ಕಾರ್ಯ ಮುಂದುವರೆದಿದೆ. 72 ದಿನಗಳ ನಂತರ ನದಿಯಲ್ಲಿ ಲಾರಿ ಹಾಗೂ ಇಬ್ಬರ ಮೃತದೇಹಗಳು ಪತ್ತೆಯಾಗಿದೆ. ಗುಡ್ಡ ಕುಸಿತದ ರಭಸಕ್ಕೆ ನದಿಗೆ ಬಿದ್ದು ಲಾರಿ ನಜ್ಜುಗುಜ್ಜಾಗಿದೆ.