ದಸರಾ ಬಂತೆಂದ್ರೆ ಸಾಕು ಎಲ್ಲಾ ಕಡೆ, ಅದರಲ್ಲೂ ಕರಾವಳಿಯಲ್ಲಿ ಹುಲಿ ವೇಷಗಳದ್ದೇ ಸದ್ದು, ದಸರಾ ಪ್ರಯುಕ್ತ ನಡೆಯುವ ಪಿಲಿ ನಲಿಕೆಯ ಸ್ಪರ್ಧೆಗಳಲ್ಲಿ ಹುಲಿ ವೇಷಗಳ ತಂಡಗಳು ತಾಸೆಯ ಸದ್ದಿಗೆ ಕುಣಿಯುವುದನ್ನು ನೋಡುವುದೇ ಚೆಂದ. ಹುಲಿಗಳ ನಾನಾ ರೀತಿಯ ಪಲ್ಟಿಗಳು, ನೆಲದಲ್ಲಿ ಹಾಕಿದ ನಾಣ್ಯ ಅಥವಾ ನೋಟುಗಳನ್ನು ಹಿಮ್ಮುಖವಾಗಿ, ತೆಗೆಯುವುದು, ಅಕ್ಕಿಮುಡಿಗಳನ್ನು ಬಾಯಲ್ಲಿ ಕಚ್ಚಿ ಎತ್ತಿ ಬಿಸಾಡುವಂತಹ ವಿವಿಧ ರೀತಿಯ ಕಸರತ್ತುಗಳನ್ನು ನೋಡುವುದೇ ಕಣ್ಣಿಗೊಂದು ಹಬ್ಬ.
ಸಾಮಾನ್ಯವಾಗಿ ಭಾರವಾದ ಅಕ್ಕಿಮುಡಿಯನ್ನು ಹಲ್ಲಿನಿಂದ ಕಚ್ಚಿ ಎತ್ತಿ ಬಿಸಾಡುವುದು ಹಿಂದಿನಿಂದಲೂ ಬಂದಿರುವ ಒಂದು ಕ್ರಮ., ಇತ್ತೀಚಿನ ದಿನಗಳಲ್ಲಿ ಮುಡಿ ಹಾಕುನ ಒಂದು ಟ್ರೆಂಡ್ ಆಗುತ್ತಿದ್ದು, ಹಲವು ಮಂದಿ ಈ ಸಾಹಸವನ್ನು ಸ್ಪರ್ಧೆಗಳಲ್ಲಿ ಅಥವಾ ಹುಲಿ ನೃತ್ಯ ಪ್ರದರ್ಶನ ವೇಳೆ ಮಾಡುತ್ತಿರುತ್ತಾರೆ. ಈ ಬಗ್ಗೆ ಲೇಡಿ ಟೈಗರ್ ಎಂದೇ ಖ್ಯಾತಿ ಪಡೆದಿರುವ ಸುಷ್ಮಾ ರಾಜ್ ರವರು ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಈ ಬಗ್ಗೆ ಹಲವಾರು ಮಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಷ್ಮಾರಾಜ್ ವೀಡಿಯೋದಲ್ಲಿ ಏನಂದ್ರು!?
ಪಿಲಿ ನಲಿಕೆ (ಹುಲಿ ಕುಣಿತ) ಸ್ಪರ್ಧೆ ಅಥವಾ ಕಾರ್ಯಕ್ರಮದಲ್ಲಿ ಭಾರವಾದ ಅಕ್ಕಿ ಮುಡಿಯನ್ನು ಹಲ್ಲಿನಿಂದ ಕಚ್ಚಿ ತಲೆ ಮೇಲಿನಿಂದ ಹಿಂಭಾಗಕ್ಕೆ ಬಿಸಾಡುವ ಒಂದು ಕಟ್ಟುಪಾಡು ಕೂಡ ಇದೆ. ಸಾಮಾನ್ಯವಾಗಿ ತಂಡದ ಬಲಿಷ್ಟ ಹುಲಿವೇಷಧಾರಿ ಈ ಸಾಹಸವನ್ನು ಪ್ರದರ್ಶನ ಮಾಡುತ್ತಾರೆ. ಈ ಕಸರತ್ತು ತುಂಬಾನೇ ಕಷ್ಟಕರವಾಗಿದ್ದು, ಸುಮಾರು 40 ಕೆ.ಜಿಗಳಿರುವ ಈ ಭಾರವಾದ ಅಕ್ಕಿ ಮುಡಿಯನ್ನು ಹಲ್ಲಲ್ಲಿ ಕಚ್ಚಿ ಎತ್ತುವಾಗ ಹುಲಿ ವೇಷಧಾರಿಗಳ ಹಲ್ಲು ಕಿತ್ತು ಹೋದಂತಹ ಮತ್ತು ಕೆಲವರ ಬೆನ್ನುಹುರಿಗೆ ಪೆಟ್ಟು ಬಿದ್ದಂತಹ ಘಟನೆಗಳು ಕೂಡಾ ನಡೆದಿದೆ. ಇದು ಅಷ್ಟು ಸುಲಭವಾದ ಸಾಹಸ ಅಲ್ವೇ ಅಲ್ಲ ಎಂದು ಸುಷ್ಮಾ ರಾಜ್ ಹೇಳಿದ್ದಾರೆ.
ಈ ಅಕ್ಕಿಮುಡಿಗೆ ಅದರದ್ದೇ ಆದ ಘನತೆ ಇದೆ, ಆದ್ರೆ ಇತ್ತೀಚಿಗೆ ಹುಡುಗೀರು, ಚಿಕ್ಕ ಚಿಕ್ಕ ಮಕ್ಳು ಈ ಅಕ್ಕಿ ಮುಡಿಯನ್ನು ಎತ್ತಿ ಬಿಸಾಡುವ ಟ್ರೆಂಡ್ ಶುರುವಾಗಿದೆ. ಈ ರೀತಿಯ ಹುಚ್ಚುತನವನ್ನು ನಿಲ್ಲಿಸಿ, ಹೀಗೆ ಮಾಡುವುದು ಮುಡಿ ಎತ್ತುವ ಗಂಡಸಿಗೆ, ಅವರ ಗತ್ತು ಗಾಂಭೀರ್ಯಕ್ಕೆ ನೀವು ಮಾಡುವ ಅವಮಾನ ಎಂದು ಹೇಳಿದ್ದಾರೆ. ನೀವು ಅಷ್ಟಕ್ಕೂ ಅಕ್ಕಿ ಮುಡಿ ಎತ್ತಲೇ ಬೇಕೆಂದಿದ್ರೆ ಸರಿಯಾದ ಕ್ರಮದ ಪ್ರಕಾರ ಮಾಡಿ, ಅದು ಬಿಟ್ಟು ಅಕ್ಕಿ ಮುಡಿಯ ಒಳಗೆ ಸ್ಪಾಂಜ್, ಹತ್ತಿ ತುಂಬಿಸಿ ಶೋಕಿಗೆ ಇದನ್ನೆಲ್ಲಾ ಮಾಡೋದು ಬೇಡ ಎಂದು ಹೇಳಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸುಷ್ಮಾರಾಜ್ ಹೇಳಿಕೆಗೆ ಅಸಮಾಧಾನ ; ಮುಡಿ ಎತ್ತುವ ವೀಡಿಯೋ ಮೂಲಕ ಟಾಂಗ್!
ಸುಷ್ಮಾರಾಜ್ ಹೇಳಿಕೆಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದು, ಮುಡಿ ಎತ್ತುವ ವೀಡಿಯೋ ಮಾಡುವುದರ ಮೂಲಕ ಸುಷ್ಮಾ ರಾಜ್ ಅವರ ಹೇಳಿಕೆಗೆ ತಿರುಗೇಟು ನೀಡುತ್ತಿದ್ದಾರೆ.
ಸುಷ್ಮಾರಾಜ್ ಅವರು ವೀಡಿಯೋದಲ್ಲಿ ಬಳಸಿದ ಕ್ಲಿಪ್ಸ್ ಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಹಲವರು ಈ ವಿಚಾರವಾಗಿ ಅಕ್ಕಿ ಮುಡಿಯನ್ನು ತಯಾರಿಸುವ ವೀಡಿಯೋ ಮಾಡಿ ಬಳಿಕ ವೀಡಿಯೋ ಮೂಲಕವೇ ಮುಡಿ ಎತ್ತುವುದನ್ನು ತೋರಿಸುತ್ತಿದ್ದಾರೆ.
ಸುಷ್ಮಾರಾಜ್ ರವರು ವೀಡಿಯೋದಲ್ಲಿ ಬಳಕೆ ಮಾಡಿರುವ ಕ್ಲಿಪ್ಸ್ ನಲ್ಲಿರುವ ಯುವತಿಯೂ ಕೂಡ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು, ಅವರು ಕೂಡ ಮುಡಿ ಎತ್ತುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಪರ-ವಿರೋಧದ ಚರ್ಚೆಗಳು ನಡೆಯುತ್ತಿದೆ.