ಮಂಗಳೂರು : ನವರಾತ್ರಿ ಹಬ್ಬ ಸನ್ನಿಹಿತವಾಗುತ್ತಿರುವಂತೆ ಖಾಸಗಿ ಬಸ್ಗಳ ಪ್ರಯಾಣ ದರ ದುಪ್ಪಟ್ಟಾಗಿದೆ. ಹಬ್ಬಕ್ಕಾಗಿ ದೂರದೂರಿನಿಂದ ಮಂಗಳೂರಿಗೆ ಆಗಮಿಸುವ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆ. ಅದರಲ್ಲೂ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸುವವರಿಗೆ ಖಾಸಗಿ ಬಸ್ನಲ್ಲಿ ಅತೀ ಹೆಚ್ಚಿನ ದರ 3,500 ರೂ. ಇದೆ.
ಪ್ರತಿ ಬಾರಿ ಹಬ್ಬದ ಸಮಯದಲ್ಲಿ ಟಿಕೆಟ್ ದರ ಏರಿಕೆ ಮಾಮೂಲಿಯಾಗಿದೆ.
ಈ ಹಿಂದೆ ಗೌರಿ-ಗಣಪತಿ ಹಬ್ಬದ ಸಮಯದಲ್ಲೂ ಬಸ್ ಟಿಕೆಟ್ ದರ ಏರಿಕೆ ಮಾಡಲಾಗಿತ್ತು. ಇದೀಗ ನವರಾತ್ರಿ ಹಬ್ಬಕ್ಕೂ ದರ ಏರಿಕೆ ಮುಂದುವರಿದಿದೆ.
ದಸರಾ ಕಣ್ತುಂಬಿಕೊಳ್ಳಲು ಸಾಮಾನ್ಯವಾಗಿ ದೂರ ದೂರಿನಿಂದ ಸಾರ್ವಜನಿಕರು ಆಗಮಿಸುತ್ತಾರೆ.
ಖಾಸಗಿ ಬಸ್ಗಳಲ್ಲಿ ಅ. 11ರಂದು ಬೆಂಗಳೂರಿನಿಂದ ಮಂಗಳೂರಿಗೆ ಅತೀ ಹೆಚ್ಚಿನ ದರ 3,500 ರೂ. ಇದೆ. ಅದೇ ರೀತಿ, ಮಂಗಳೂರಿನಿಂದ ಮೈಸೂರಿಗೆ 1,200 ರೂ., ಬಳ್ಳಾರಿಗೆ 950 ರೂ., ಬಾಗಲಕೋಟೆ 1,500 ರೂ., ಕೊಪ್ಪಳ 2,600 ರೂ., ವಿಜಯಪುರ 1,500 ರೂ. ಇದೆ. ಹಬ್ಬಕ್ಕೆ ಕೆಲ ದಿನ ಬಾಕಿ ಇರುವಾಗಿನಿಂದಲೇ ಏರುಗತಿಯಲ್ಲಿ ಸಾಗಿರುವ ಬಸ್ ಪ್ರಯಾಣ ದರ ಮುಂದಿನ ದಿನಗಳಲ್ಲಿ ಇನ್ನಷ್ಟು ದುಬಾರಿಯಾಗುವ ಸಾಧ್ಯತೆ ಇದೆ.
ಕೆಎಸ್ಸಾರ್ಟಿಸಿಯಲ್ಲಿ ಪ್ರಯಾಣ ದರ ಸದ್ಯಕ್ಕೆ ಏರಿಕೆಯಾಗಿಲ್ಲ.