ಕಾರವಾರ: ಶಿರೂರು ಭೂ ಕುಸಿತ ದುರಂತದ ಹಿನ್ನೆಲೆ ನಡೆಯುತ್ತಿದ್ದ ಮೂರನೇ ಹಂತದ ಡ್ರಜ್ಜಿಂಗ್ ಕಾರ್ಯಾಚರಣೆಯನ್ನು ಸ್ಥಗಿತ ಮಾಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಶಿರೂರು ಭೂ ಕುಸಿತದ ಹಿನ್ನೆಲೆ ಮೂರನೇ ಹಂತದ ಕಾರ್ಯಾಚರಣೆಯು ನಡೆಯುತ್ತಿತ್ತು. 13 ದಿನ ಪೂರೈಸಿದ ಡ್ರಜ್ಜಿಂಗ್ ಬೋಟ್ ಮೂಲಕ ನಡೆಯುತ್ತಿದ್ದ ಕಾರ್ಯಾಚರಣೆಯನ್ನು ಇಂದು ಸ್ಥಗಿತ ಮಾಡಲಾಗಿದೆ.
ಕಳೆದ 13 ದಿನದಿಂದ ಅಂಕೋಲದ ಗಂಗಾವಳಿ ನದಿಯಲ್ಲಿ ಓಷಿಯನ್ ಕಂಪನಿ ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿತ್ತು. 90 ಲಕ್ಷದ ಮೊತ್ತದಲ್ಲಿ 13 ದಿನ ಕಾರ್ಯಾಚರಣೆ ಪೂರ್ಣಗೊಂಡಿದೆ. 13 ದಿನದ ಕಾರ್ಯಾಚರಣೆಯಲ್ಲಿ ಕೇರಳ ಮೂಲದ ಅರ್ಜುನ್ ಶವ ಹಾಗೂ ಲಾರಿ ಹೊರತೆಗೆದಿದ್ದು, ನಂತರ ಮನುಷ್ಯನ ಮೂಳೆಗಳು ಹಾಗೂ ಕೆಲವು ವಸ್ತುಗಳನ್ನು ಸಹ ಹೊರತೆಗೆಯಲಾಗಿದೆ.
ಭೂಕುಸಿತ ದುರಂತದಲ್ಲಿ ಸತತ 77 ದಿನದ ದೀರ್ಘ ಕಾರ್ಯಾಚರಣೆ ಇದಾಗಿದ್ದು, ಒಟ್ಟು ಮೂರು ಹಂತದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಸದ್ಯ ಸಿಕ್ಕ ಮೂಳೆಗಳ ಡಿ.ಎನ್.ಎ ವರದಿ ಬರಬೇಕಿದ್ದು, ಕಾಣೆಯಾದ ಜಗನ್ನಾಥ್, ಲೋಕೇಶ್ ಶವ ಶೋಧ ನಡೆಯಬೇಕಿದೆ.