ಆಗ್ರಾ : ಮಗಳು ಲೈಂಗಿಕ ಹಗರಣದಲ್ಲಿ ಸಿಕ್ಕಿಬಿದ್ದಿದ್ದಾಳೆಂದು ಬಂದ ಸೈಬರ್ ವಂಚಕರ ಕರೆಗೆ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ಹೃದಯಾಘಾತಕ್ಕೆ ಬಲಿಯಾದ ಘಟನೆ ಆಗ್ರಾದಲ್ಲಿ ಬೆಳಕಿಗೆ ಬಂದಿದೆ.
ಸೆಪ್ಟೆಂಬರ್ 30ರಂದು ಈ ಘಟನೆ ನಡೆದಿದ್ದು, ವಂಚನೆಯ ಕರೆಗೆ ಶಿಕ್ಷಕಿ ಅನ್ಯಾಯವಾಗಿ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮಾಲ್ತಿ ವರ್ವಾ (58) ಸಾವನ್ನಪ್ಪಿರುವ ಶಿಕ್ಷಕಿ. ಆಗ್ರಾದ ಅಚ್ನೇರಾದ ಜೂನಿಯರ್ ಹೈಸ್ಕೂಲ್ನಲ್ಲಿ ಶಿಕ್ಷಕಿಯಾಗಿದ್ದರು.
ಸೆಪ್ಟೆಂಬರ್ 30ರಂದು ಮಧ್ಯಾಹ್ನ 12 ಗಂಟೆಗೆ ವಾಟ್ಸ್ಆ್ಯಪ್ನಲ್ಲಿ ಕರೆ ಬಂದಿದೆ. ಕರೆ ಸ್ವೀಕರಿಸಿದ ಶಿಕ್ಷಕಿಗೆ ಮಗಳು ಲೈಂಗಿಕ ಹಗರಣದಲ್ಲಿ ಸಿಕ್ಕಿಬಿದ್ದಿದ್ದಾಳೆ. ಆಕೆಯ ಗುರುತನ್ನು ಬಹಿರಂಗ ಪಡಿಸುತ್ತೇವೆ ಎಂದು ಸೈಬರ್ ವಂಚಕರು ಕರೆಯಲ್ಲಿ ಬೆದರಿಸಿದ್ದಾರೆ ಎಂದು ಮಗ ದೀಪಾಂಶು ರಜಪೂತ್ ತಿಳಿಸಿದ್ದಾರೆ.
ತಾಯಿ ನನ್ನ ಬಳಿ ಸಹೋದರಿಯ ವಿಚಾರ ಹೇಳಿದರು. ಫೋನ್ ನಂಬರ್ ಪರಿಶೀಲಿಸಿದಾಗ ಅದು ಸೈಬರ್ ವಂಚನೆಯ ಕರೆ ಎಂದು ನಾನು ತಾಯಿಗೆ ಹೇಳಿದೆ. ಆದರೆ ತಾಯಿ ಚಿಂತೆಗೆ ಒಳಗಾಗಿದ್ದರು. ನಂತರ ನಾನು ಸಹೋದರಿಯೊಂದಿಗೆ ಮಾತನಾಡಿದೆ. ಎಲ್ಲವನ್ನು ಸಹಜ ಸ್ಥಿತಿಗೆ ತಂದಿದ್ದೇನೆ. ಚಿಂತಿಸಬೇಡಿ ಎಂದು ತಾಯಿ ಬಳಿ ಹೇಳಿದರೂ ಅವರಿಗಾದ ಶಾಕ್ನಿಂದಾಗಿ ಆರೋಗ್ಯ ಹದಗೆಟ್ಟಿತು. ತಾಯಿ ಶಾಲೆ ಮುಗಿಸಿ ಮನೆಗೆ ಬರುವಾಗ ಎದೆನೋವು ಎಂದು ಹೇಳಿದರು. ಮನೆಗೆ ಬಂದಂತೆ ಅವರ ಆರೋಗ್ಯ ತುಂಬಾ ಹದಗೆಟ್ಟಿತು. ಕೂಡಲೇ ಆಸ್ಪತ್ರೆಗೆ ಕರೆದೊಯ್ದೆವು. ಆದರೆ ಈ ವೇಳೆ ವೈದರು ಸಾವನ್ನಪ್ಪಿರುವುದಾಗಿ ದೃಢಪಡಿಸಿದರು ಎಂದು ಮಾಲ್ತಿ ವರ್ವಾ ಮಗ ಹೇಳಿದ್ದಾರೆ.
ಸದ್ಯ ಈ ಪ್ರಕರಣದ ಕುರಿತು ಜಗದೀಶ್ಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ತನಿಖೆ ನಡೆಯುತ್ತಿದೆ.