ಮಂಗಳೂರು : ನಗರ ಹಾಗೂ ಇತರ ರಾಜ್ಯಗಳಿಗೆ ಎಂಡಿಎಂಎ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ನೈಜೀರಿಯಾ ಮೂಲದ ಪ್ರಜೆಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿ, 6 ಕೋ. ರೂ. ಮೌಲ್ಯದ 6.300 ಕೆಜಿ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.
ಇದು ರಾಜ್ಯದ ಎರಡನೇ ಅತಿದೊಡ್ಡ ಹಾಗೂ ಮಂಗಳೂರಿನ ಇತಿಹಾಸದಲ್ಲೇ ಅತಿದೊಡ್ಡ ಡ್ರಗ್ಸ್ ವಶಪಡಿಸಿದ ಪ್ರಕರಣವಾಗಿದೆ.
‘ಡ್ರಗ್ಸ್ ಫ್ರೀ ಮಂಗಳೂರು’ ಮಾಡುವ ಉದ್ದೇಶ ಹೊಂದಿದ್ದೇವೆ. ಈಚೆಗೆ ರಾಜ್ಯ ಗೃಹಸಚಿವರೂ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಅದರಂತೆ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ತಿಳಿಸಿದರು.
ನೈಜೀರಿಯಾ ಮೂಲದ, ಬೆಂಗಳೂರಿನ ದೊಮ್ಮಸಂದ್ರ ಸ್ವಾಮಿ ವಿವೇಕಾನಂದ ನಗರದ ಸಾಯಿಮಿಡೋ ಪೇಸ್-2 ಗೋವಿಂದ ರೆಡ್ಡಿ ಲೇಔಟ್‌ನ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ ಪೀಟರ್ ಅಕೆಡಿ ಬೆಲನೋವು (38) ಎಂಬಾತನನ್ನು ಬಂಧಿಸಿ, ಆತನಿಂದ 6 ಕೋಟಿ ರೂ. ಮೌಲ್ಯದ ಕ್ರಿಸ್ಟಲ್ ರೂಪದಲ್ಲಿದ್ದ ಹಾಗೂ ಹಂಚುವುದಕ್ಕಾಗಿ 50-70 ಗ್ರಾಂ ತೂಕದ ಪ್ಯಾಕೆಟ್ ರೂಪದಲ್ಲಿ ಇರಿಸಿಕೊಂಡಿದ್ದ ಎಂಡಿಎಂಎ ಡ್ರಗ್ ವಶಪಡಿಸಲಾಗಿದೆ.
ಮಂಗಳೂರು ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಪಂಪ್‌ವೆಲ್ ಬಳಿಯ ಲಾಡ್ಜ್ ವೊಂದರಲ್ಲಿ ಮಾದಕ ವಸ್ತುವನ್ನು ಹೊಂದಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ತೊಕ್ಕೊಟ್ಟು ಪೆರ್ಮನ್ನೂರಿನ ಚೆಂಬುಗುಡ್ಡೆಯ ಹೈದರ್ ಅಲಿಯಾಸ್ ಹೈದರ್ ಅಲಿ(51)ಯನ್ನು ಬಂಧಿಸಿ 75 ಸಾ. ರೂ. ಮೌಲ್ಯದ 15 ಗ್ರಾಂ ಮಾದಕ ವಸ್ತು ಎಂಡಿಎಂಎ ಅನ್ನು ವಶಪಡಿಸಿಕೊಳ್ಳಲಾಗಿತ್ತು. ಆತನ ವಿರುದ್ಧ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯನ್ನು ಮಂಗಳೂರು ಸಿಸಿಬಿ ಘಟಕಕ್ಕೆ ಹಸ್ತಾಂತರಿಸಲಾಗಿತ್ತು.
ನಗರದಲ್ಲಿ ಮಾದಕ ವಸ್ತುವನ್ನು ಪೂರೈಸುವ ಡ್ರಗ್ಸ್ ಪೆಡ್ಲರ್‌ಗಳನ್ನು ಪತ್ತೆ ಹಚ್ಚುವ ಸಲುವಾಗಿ ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆಯನ್ನು ಮುಂದುವರಿಸಿ ತನಿಖೆ ಕೈಗೊಂಡಿದ್ದರು.
ಹೈದರ್ ಅಲಿಗೆ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಇನ್ನಿತರ ಡ್ರಗ್ ಪೆಡ್ಲರ್‌ಗಳ ಮಾಹಿತಿ ಸಂಗ್ರಹಿಸಿ ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ಮಾದಕ ವಸ್ತುವನ್ನು ಪೂರೈಸುವ ವ್ಯಕ್ತಿಯು ಬೆಂಗಳೂರಿನಲ್ಲಿರುವ ನೈಜೀರಿಯಾ ಪ್ರಜೆ ಪೀಟರ್ ಎಂಬ ಮಾಹಿತಿ ಕಲೆ ಹಾಕಿದ್ದರು.
ಪೀಟರ್ ಮನೆಯಿಂದ ಡ್ರಗ್ ಮಾತ್ರವಲ್ಲದೆ 3 ಮೊಬೈಲ್ ಫೋನುಗಳು, ಡಿಜಿಟಲ್ ತೂಕ ಮಾಪಕ, ಒಟ್ಟು 35 ಎಟಿಎಂ/ಡೆಬಿಟ್ ಕಾರ್ಡ್‌ಗಳು, 17 ಸಕ್ರಿಯವಿಲ್ಲದ ಸಿಮ್ ಕಾರ್ಡ್‌ಗಳು, 10 ವಿವಿಧ ಬ್ಯಾಂಕ್‌ಗಳ ಬ್ಯಾಂಕ್ ಖಾತೆ ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈತನ ವಿರುದ್ಧ ಈ ಹಿಂದೆ 2023ರಲ್ಲಿ ಬೆಂಗಳೂರಿನ ವಿದ್ಯಾರಣ್ಯಾಪುರ ಪೊಲೀಸ್ ಠಾಣೆಯಲ್ಲಿ ಡ್ರಗ್ಸ್ ಮಾರಾಟಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿರುತ್ತದೆ. ಈತನು ಬೆಂಗಳೂರು ನಗರ ಹಾಗೂ ರಾಜ್ಯದ ವಿವಿಧ ಕಡೆಗಳಿಗೆ ಹಾಗೂ ಕೇರಳಕ್ಕೂ ಮಾದಕ ವಸ್ತುವನ್ನು ಪೂರೈಸುತ್ತಿದ್ದ. ಈ ದಂಧೆಯಲ್ಲಿ ಹಲವರು ಭಾಗಿಯಾಗಿದ್ದು, ಈ ನಿಟ್ಟಿನಲ್ಲಿ ಪತ್ತೆ ಕಾರ್ಯ ಮುಂದುವರಿಯುವುದು ಎಂದು ಕಮಿಷನರ್ ತಿಳಿಸಿದ್ದಾರೆ.
ಆಯುಕ್ತ ಅನುಪಮ್ ಅಗರ್‌ವಾಲ್ ಮಾರ್ಗದರ್ಶನದಲ್ಲಿ, ಡಿಸಿಪಿ (ಕಾನೂನು ಸುವ್ಯವಸ್ಥೆ)ಸಿದ್ದಾರ್ಥ ಗೋಯಲ್, ಡಿಸಿಪಿ ಅಪರಾಧ ಮತ್ತು ಸಂಚಾರ ಬಿ.ಪಿ.ದಿನೇಶ್ ಕುಮಾರ್ ನಿರ್ದೇಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ, ಇನ್‌ಸ್ಪೆಕ್ಟರ್ ಶ್ಯಾಮ್ ಸುಂದರ್ ಎಚ್.ಎಂ, ಪಿಎಸ್‌ಐ ಸುದೀಪ್ ಎಂ.ವಿ, ಶರಣಪ್ಪ ಭಂಡಾರಿ, ನರೇಂದ್ರ, ಎಎಸ್‌ಐ ಮೋಹನ್ ಕೆ ವಿ., ರಾಮ ಪೂಜಾರಿ, ಶೀನಪ್ಪ, ಸುಜನ್ ಶೆಟ್ಟಿ ಮತ್ತು ಸಿಸಿಬಿ ಘಟಕದ ಸಿಬ್ಬಂದಿ ಪಾಲ್ಗೊಂಡಿದ್ದರು.




























