ಮಡಿಕೇರಿ : ಇತ್ತೀಚಿನ ದಿನಗಳಲ್ಲಿ ತುಳುನಾಡಿನ ದೈವ ನರ್ತಕರ ಹಾಗೆ ಕೆಲವರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನರ್ತನ ಮಾಡುತ್ತಿರುವುದರಿಂದ ತುಳುನಾಡಿನ ದೈವ ನರ್ತಕರು ಅಂತವರ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.
ನೂರಾರು ವರ್ಷಗಳ ಸಂಸ್ಕೃತಿ ಪರಂಪರೆಯನ್ನು ಹೊಂದಿರುವ ತುಳುನಾಡಿನ ದೈವಗಳನ್ನು ತುಳುನಾಡಿನ ಜನರು ಅತ್ಯಂತ ಭಕ್ತಿ ಭಾವದಿಂದ ಪೂಜೆ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಕಾಂತಾರ ಸಿನಿಮಾದ ಹಾಡುಗಳನ್ನು ಬಳಸಿಕೊಂಡು ಮಕ್ಕಳು ಯುವಕ ಯುವತಿಯರು ಸಾಂಸ್ಕೃತಿಕ ವೇದಿಕೆಗಳಲ್ಲಿ ದೈವ ನರ್ತನೆ ಮಾಡುತ್ತಿರುವುದು ದೈವ ನರ್ತನ ಮಾಡುವ ಆರಾಧಕರಿಗೆ ಸಾಕಷ್ಟು ನೋವು ಉಂಟು ಮಾಡುತ್ತಿದೆ ಎನ್ನಲಾಗಿದೆ.
ಮಂಜಿನ ನಗರಿ ಮಡಿಕೇರಿಯಲ್ಲಿ ದಸರಾ ವೇದಿಕೆಯಲ್ಲಿ ದೈವ ನರ್ತನೆಯನ್ನು ಮಹಿಳೆಯರು ಮಾಡಿದ್ದಾರೆ. ಹೀಗಾಗಿ ನಮ್ಮ ನಂಬಿಕೆಗೆ ಅವಮಾನ ಮಾಡಲಾಗುತ್ತಿದೆ ಎಂದು ಕೊಡಗು ಜಿಲ್ಲೆಯ ದೈವ ನರ್ತಕರ ಸಂಘದಿಂದ ಕಾನೂನು ಸಮರಕ್ಕೆ ಮುಂದಾಗುತ್ತೇವೆ ಎಂದು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಕಾಂತಾರ ಸಿನಿಮಾ ಹಾಡು ಹಾಕಿಕೊಂಡು ದೈವ ನರ್ತನೆ ಮಾಡಬಾರದು ಎಂದು ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಾಕಷ್ಟು ಶಾಲೆ ಕಾಲೇಜುಗಳಲ್ಲಿ ದೈವ ನರ್ತನೆ ಮಾಡುವುದು ನಿಲ್ಲಿಸಲಾಗಿತ್ತು. ಆದರೀಗ ಮಡಿಕೇರಿ ಹಾಗೂ ಗೋಣಿಕೋಪ್ಪದಲ್ಲಿ ದಸರಾ ಕಾರ್ಯಕ್ರಮ ಆಗುತ್ತಿದೆ. ಈ ಕಾರ್ಯಕ್ರಮಗಳಲ್ಲಿ ಮಹಿಳೆಯರೇ ದೈವ ವೇಷಗಳನ್ನು ಹಾಕಿಕೊಂಡು ದೈವ ನರ್ತನೆ ಮಾಡುತ್ತಿದ್ದಾರೆ. ದೈವ ನರ್ತನೆ ಮಾಡಬೇಕಾದರೆ ಗಂಡಸರು ಮಾಡಬೇಕು ಅದರದ್ದೇ ಆದ ರೀತಿ ನೀತಿಗಳ ನಿಯಮಗಳು ಇದೆ. ಆದ್ರೆ ಕೆಲವರು ಜನರಿಗೆ ಮನರಂಜನೆ ದೃಷ್ಟಿಯಿಂದ ಈ ರೀತಿಯಲ್ಲಿ ತುಳು ನಾಡಿನ ದೈವಗಳಿಗೆ ಅವಮಾನ ಮಾಡುತ್ತಿದ್ದಾರೆ. ಇದರ ಬಗ್ಗೆ ದೈವಗಳೇ ಅವರಿಗೆ ಶಿಕ್ಷೆ ನೀಡುತ್ತದೆ. ಹಾಗೂ ತುಳು ನಾಡಿದ ಎಲ್ಲಾ ದೈವ ಆರಾಧಾಕರನ್ನು ಕರೆದುಕೊಂಡು ಬೃಹತ್ ಹೋರಾಟ ನಡೆಸಲಾಗುತ್ತದೆ ಎಂದು ದೈವ ನರ್ತಕರು ಎಚ್ಚರಿಕೆ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಲ್ಲಿ ನಾಟಕಗಳಲ್ಲಿ ವೇದಿಕೆಯ ವಿವಿಧ ಕಾರ್ಯಕ್ರಮಗಳಲ್ಲಿ ದೈವ ನರ್ತಕರನ್ನು ಅವಮಾನ ಮಾಡುವಂತಹ ಕೆಲಸ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಕಾನೂನು ರೀತಿಯ ಕ್ರಮಗಳನ್ನು ತೆಗೆದುಕೊಳ್ಳುವ ಅನಿವಾರ್ಯತೆ ಇದೆ ಎಂದು ಸಂಘಟನೆಯ ಪ್ರಮುಖರು ತಿಳಿಸಿದ್ದಾರೆ.