ಮಂಗಳೂರು : ಆನ್ ಲೈನ್ ನಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿರುವ ಸೈಬರ್ ಕ್ರೈಮ್ ಸಿಐಡಿ ತಂಡ ಮಕ್ಕಳ ಅಶ್ಲೀಲ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದ ಮೇಲೆ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದೆ.
ಸುಪ್ರೀಂ ಕೋರ್ಟ್ ನ ನಿರ್ದೇಶನದ ಪ್ರಕಾರ ಕೇಂದ್ರ ಸರಕಾರವು ಕಾಣೆಯಾದ, ಶೋಷಿತ ಮಕ್ಕಳ ಕೇಂದ್ರಕ್ಕೆ ಬಂದ ಮಕ್ಕಳ ಮೇಲಿನ ಪ್ರಕರಣಕ್ಕೆ ಸಂಬಂಧಿಸಿ ನಗರದ ಪೊಲೀಸ್ ಠಾಣೆಗಳ ಮೂಲಕ ತನಿಖೆಗೆ ಆದೇಶಿಸಿದೆ. ಮಂಗಳೂರಿಗೆ ಸಂಬಂಧಿಸಿದ ಈ ದೂರನ್ನು ಬೆಂಗಳೂರು ಸೈಬರ್ ಕ್ರೈಂ ವಿಭಾಗದ ಸಿಎಡಿ ಸ್ವೀಕರಿಸಿ ದೂರಿನ ಮುಂದಿನ ತನಿಖೆಯ ಬಗ್ಗೆ ಮಂಗಳೂರಿನ ಸೈಬರ್ ಕ್ರೈಮ್ ಪೋಲಿಸ್ ಠಾಣೆಗೆ ಕಳುಹಿಸಿಕೊಟ್ಟಿತ್ತು.
ಈ ಪ್ರಕಾರ ತನಿಖೆ ನಡೆಸಿದಾಗ ಮೂರು ಪ್ರಕರಣಗಳು ಬೆಳಕಿಗೆ ಬಂದಿದೆ :-
2020 ಜೂನ್ 25ರಂದು ಮಗುವಿನ ಅಶ್ಲೀಲ ವಿಡಿಯೋವನ್ನು ಪ್ರಜ್ವಲ್ ಕೋಟ್ಯಾನ್ ಎಂಬಾತ ಡೌನ್ಲೋಡ್ ಮಾಡಿ ಕುಲಾಲ್ ಎಂಬಾತನಿಗೆ ಇನ್ ಸ್ಟಾಗ್ರಾಮ್ ನಲ್ಲಿ ಕಳುಹಿಸಿರುವ ಮಾಹಿತಿ ಲಭಿಸಿದೆ ಸಿಡಿಯಲ್ಲಿರುವ ಮಾಹಿತಿಯನ್ನು ಖಾತರಿಪಡಿಸಿಕೊಂಡು ಆರೋಪಿ ವಿರುದ್ಧ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ
ಇನ್ನೊಂದು ಸಿಡಿಯನ್ನು ಪರಿಶೀಲಿಸಿದಾಗ 2020ರ ಮೇ 17ರಂದು ಮಗುವಿನ ಅಶ್ಲೀಲ ವಿಡಿಯೋವನ್ನು ನಾಗೇಶ್ ಸುವರ್ಣ ಅವರಿಗೆ ಫೇಸ್ಬುಕ್ ಮೆಸೇಜಿನಲ್ಲಿ ಕಳುಹಿಸಿರುವ ಮಾಹಿತಿ ಲಭಿಸಿದೆ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
2020 ರ ಜೂನ್ 24ರಂದು ಇನ್ನೊಂದು ಮಗುವಿನ ಅಶ್ಲೀಲತೆಯ ವಿಡಿಯೋವನ್ನು ಪ್ರಶಾಂತ್ ಪಚ್ಚು ಎಂಬಾತ ಡೌನ್ಲೋಡ್ ಮಾಡಿ ದೇವಿಕಾ ನಾಯರ್ ಅವರಿಗೆ ಫೇಸ್ ಬುಕ್ ನಲ್ಲಿ ಕಳುಹಿಸಿರುವ ಮಾಹಿತಿ ಲಭಿಸಿದ್ದು ಆರೋಪಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.