ದಾವಣಗೆರೆ : ಕಳೆದ ಮೂರು ತಿಂಗಳಿನಿಂದ ಗೌರವ ಧನ ಬಿಡುಗಡೆಯಾಗದೆ ಜೀವನ ನಿರ್ವಹಣೆಗೆ ತೊಂದರೆಯಿಂದ ಬೇಸತ್ತ ಅಂಗನವಾಡಿ ಸಹಾಯಕಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆಯ ಡಾಂಗೇ ಪಾರ್ಕಿನ ಅಂಗನವಾಡಿ ಕೇಂದ್ರದ ಸಹಾಯಕಿ ಭಾರತಿ ಆತ್ಮಹತ್ಯೆಗೆ ಯತ್ನಿಸಿದವರು.
ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ, ಇತರೆಡೆ ಕರೆದೊಯ್ಯಲು ಹಣಕಾಸಿನ ತೊಂದರೆಯಿಂದ ಕುಟುಂಬದವರು ಪರಿತಪಿಸುತ್ತಿದ್ದಾರೆ.
ರಾಜ್ಯ ಸರ್ಕಾರ ಕಳೆದ ಮೂರು ತಿಂಗಳನಿಂದ ಗೌರವ ಧನ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಭಾರತಿ ಅವರು ಕುಟುಂಬ ನಿರ್ವಹಣೆಗೆ ಕೆಲವು ಕಡೆ ಸಾಲ ಮಾಡಿದ್ದರು. ಗೌರವ ಧನ ಬಂದಲ್ಲಿ ಸಾಲ ತೀರುವಳಿ ಮಾಡುವ ಯೋಜನೆ ಇತ್ತು. ಆದರೆ, ಗೌರವ ಧನ ಬಿಡುಗಡೆ ಆಗಿರಲಿಲ್ಲ. ಒಂದು ಕಡೆ ಜೀವನ ನಿರ್ವಹಣೆಯ ಸಮಸ್ಯೆ ಮತ್ತೊಂದು ಕಡೆ ಸಾಲ ತೀರುವಳಿಗೆ ಒತ್ತಡದಿಂದ ಮನನೊಂದು ಆಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಭಾರತಿ ಅವರ ಪತಿ ಆಟೋರಿಕ್ಷಾ ಚಾಲಕರಾಗಿದ್ದು, ಬರುವಂತಹ ಆದಾಯದಲ್ಲೇ ಜೀವನ ನಿರ್ವಹಣೆ ಮಾಡು ತ್ತಿದ್ದಾರೆ. ಇಬ್ಬರು ಹೆಣ್ಣು ಮಕ್ಕಳ ವಿದ್ಯಾಭ್ಯಾಸವನ್ನೂ ಬರುವಂತಹ ಗೌರವಧನದಲ್ಲೇ ನಿರ್ವಹಣೆ ಮಾಡುತ್ತಿದ್ದರು.
ಮೂರು ತಿಂಗಳಾದರೂ ಗೌರವ ಧನ ಬಾರದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿರ ಫೆಡರೇಶನ್ ರಾಜ್ಯ ಸಂಚಾಲಕ ಅವರಗೆರೆ ವಾಸು ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ಭೇಟಿ ನೀಡಿ ಭಾರತಿ ಅವರ ಆರೋಗ್ಯ ವಿಚಾರಿಸಿದರು.



























