ರಾತ್ರೋರಾತ್ರಿ ಸ್ಟಾರ್ ಆದೋರನ್ನ ನೋಡಿರ್ತೀರಾ. ರಾತ್ರೋರಾತ್ರಿ ಡಾನ್ ಆದೋರನ್ನ ನೋಡಿರ್ತೀರಾ. ರಾತ್ರೋರಾತ್ರಿ ಕರೋಡ್ ಪತಿ ಆದೋರನ್ನ ನೋಡಿದ್ದೀರಾ. ಅದೃಷ್ಟ ಕೈಹಿಡಿದು ಇಲ್ಲೊಬ್ಬ ರಾತ್ರೋರಾತ್ರಿ ಕೋಟ್ಯಾಧಿಪತಿ ಆಗಿಬಿಟ್ಟಿದ್ದಾನೆ.
ಹೆಸರು ಅಲ್ತಾಫ್ ಪಾಷಾ ಅಂತ. ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದಲ್ಲಿ ಬೈಕ್ ಮೆಕ್ಯಾನಿಕ್ ಆಗಿರೋ ಈತ ಅದೇನು ಅದೃಷ್ಟ ಮಾಡಿದ್ನೋ ಗೊತ್ತಿಲ್ಲ, ರಾತ್ರೋ ರಾತ್ರಿ ಈತನ ಬದುಕೇ ಬದಲಾಗಿ ಹೋಗಿದೆ.
ಈ ಅಲ್ತಾಫ್ 15 ವರ್ಷಗಳಿಂದಲೂ ಕೇರಳ ಲಾಟರಿ ಖರೀದಿಸುತ್ತಿದ್ರಂತೆ. ಹೀಗೆ ಕಳೆದ 6 ತಿಂಗಳ ಹಿಂದೆ ಸಹ 500 ರೂಪಾಯಿಯ 2 ಲಾಟರಿ ಖರೀದಿಸಿ ಇಟ್ಟುಕೊಂಡಿದ್ರಂತೆ. ಅದರಲ್ಲಿ ಒಂದು ಲಾಟರಿ ಮಾರೋಕು ಮುಂದಾಗಿದ್ರಂತೆ, ಆದರೆ ಅದೇ ಲಾಟರಿ ಇವತ್ತು ಅಲ್ತಾಫ್ ಪಾಷಾ ಅವರನ್ನ 25 ಕೋಟಿಯ ಒಡೆಯರನ್ನಾಗಿ ಮಾಡಿದೆ.
ಅಲ್ತಾಫ್ ಪಾಷಾ ಲಾಟರಿ ಖರೀದಿಗಾಗಿಯೇ ತಮ್ಮ ಫ್ಯಾಮಿಲಿಯನ್ನ ಕೇರಳಕ್ಕೆ ಪ್ರವಾಸಕ್ಕೆ ಕರೆದೊಯ್ದುತ್ತಿದ್ರಂತೆ. ಕೇರಳ ಬಿಟ್ಟು ಬೇರೆ ಪ್ರವಾಸಿ ಸ್ಥಳಗಳಿಗೆ ಹೋಗುತ್ತಿರಲಿಲ್ಲಲ್ವಂತೆ. ಹತ್ತಾರು ವರ್ಷಗಳಿಂದ ಲಾಟರಿ ಖರೀದಿಸಿ, ಖರೀದಿಸಿ ಲಕ್ಷಾಂತರ ರೂಪಾಯಿ ಹಣವನ್ನೂ ಕಳೆದುಕೊಂಡಿದ್ರಂತೆ. ಬೈಕ್ ಮೆಕಾನಿಕ್ನಿಂದಲೇ ಜೀವನ ಸಾಗಿಸುತ್ತಿದ್ದ ಈ ಅಲ್ತಾಫ್, ಬಾಡಿಗೆ ಮನೆ ಜೀವನ, ಸಾಲದ ಸುಳಿಯಿಂದ ಕಂಗಾಲಾಗಿದ್ರಂತೆ. ಆದ್ರೆ ಅದೃಷ್ಟ ದೇವತೆಯಂತೆ ಬಂದ ಈ ಲಾಟರಿ ಅಲ್ತಾಫ್ ಪಾಷಾ ಬದುಕನ್ನ ಬದಲಾಯಿಸಿದೆ.
ತಾವು ಖರೀದಿ ಮಾಡಿರೋ ಲಾಟರಿಗೆ 25 ಕೋಟಿ ಬಂದಿದೆ ಅಂತ ತಿಳಿಯುತ್ತಿದ್ದಂತೆ ಅಲ್ತಾಫ್ ಪಾಷಾ ಕೇರಳ ದಾರಿ ಹಿಡಿದಿದ್ದಾರೆ. ರಾತ್ರೋರಾತ್ರಿ ತಮ್ಮ ಅಳಿಯ ಅಲ್ತಾಫ್ ಕೋಟ್ಯಾಧಿಪತಿಯಾಗಿದ್ದಕ್ಕೆ ಅವರ ಅತ್ತೆ ಫುಲ್ ಖುಷ್ ಆಗಿದ್ದಾರೆ. ಅತ್ತೆ ಸಾಯಿರಾ ಭಾನು ಅಳಿಯ ಮುಂದೆ ಒಳ್ಳೆ ಜೀವನ ನಡೆಸಲಿ ಅಂತ ಹಾರೈಸಿದ್ದಾರೆ.