ಉಪ್ಪಿನಂಗಡಿ : ವಲಯ ಅರಣ್ಯ ವ್ಯಾಪ್ತಿಯ ಮೀಸಲು ಅರಣ್ಯ ಪ್ರದೇಶದಲ್ಲಿ ನಿರಂತರವಾಗಿ ಕಾಡು ಪ್ರಾಣಿಗಳ ಬೇಟೆ ನಡೆಯುತ್ತಿರುವ ಆರೋಪದ ಬೆನ್ನಲ್ಲೇ, ಹಾಡಹಗಲೇ ನಾಲ್ವರು ಬೇಟೆಗಾರರ ತಂಡ ಭಾರೀ ಗಾತ್ರದ ಕಾಡುಕೋಣವನ್ನು ಕೊಂದು ಒಣ ಮಾಂಸವನ್ನಾಗಿ ಪರಿವರ್ತಿಸಿದ ಘಟನೆಯನ್ನು ಉಪ್ಪಿನಂಗಡಿ ಅರಣ್ಯಾಧಿಕಾರಿಗಳ ತಂಡ ಪತ್ತೆ ಹಚ್ಚಿದೆ.
ನಿಡ್ಲೆ ಗ್ರಾಮದ ಬೂಡುಜಾಲಿನಲ್ಲಿ ಮೀಸಲು ಅರಣ್ಯದ ಅಂಚಿನಲ್ಲಿರುವ ತೋಟದಲ್ಲಿ ಕಾಡುಕೋಣವೊಂದನ್ನು ಗುಂಡಿಕ್ಕಿ ಕೊಂದು ಕಾಡಿನಲ್ಲೇ ಕತ್ತರಿಸಿ ಪಿಕಪ್ ವಾಹನದ ಮೂಲಕ ಸಾಗಿಸಿರುವ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು.
ಬೂಡುಜಾಲು ಅರಣ್ಯ ಅಂಚಿನಲ್ಲಿ ಇರುವ ತೋಟಕ್ಕೆ ಬೃಹತ್ ಗಾತ್ರದ ಕಾಡುಕೋಣ ಬರುತ್ತಿತ್ತೆನ್ನಲಾಗಿದ್ದು, ಇದಕ್ಕಾಗಿ ಕಾದು ಕುಳಿತಿದ್ದ ಶಿಬಾಜೆ ಹಾಗೂ ಶಿರಾಡಿ ಪರಿಸರದವರನ್ನು ಒಳಗೊಂಡ ತಂಡ ಬೇಟೆಯಾಡಿದೆ ಎಂದು ತಿಳಿದುಬಂದಿದೆ.
ಗುಂಡೇಟು ತಿಂದ ಕಾಡುಕೋಣ ಓಡಿ ಹೋಗಿದ್ದು, ಮರುದಿನ ಕಾಡಿನಲ್ಲಿ ಹುಡುಕಾಡಿ ಅನತಿ ದೂರದಲ್ಲಿ ಗಾಯಗೊಂಡು ಬಿದ್ದಿದ್ದ ಕಾಡುಕೋಣವನ್ನು ಪತ್ತೆ ಹಚ್ಚಿ ಕೊಲ್ಲಲಾಗಿದೆ. ಕೊಂದ ಕಾಡುಕೋಣವನ್ನು ಅಲ್ಲೇ ತುಂಡು ಮಾಡಿ ರಾಜು ಎಂಬಾತನ ಮನೆಗೆ ಪಿಕಪ್ ವಾಹನದಲ್ಲಿ ತಂದು ಅಲ್ಲಿ ಅದನ್ನು ಒಣ ಮಾಂಸವಾಗಿ ಪರಿವರ್ತಿಸಿ ಶೇಖರಿಸಿ ಇಡಲಾಗಿರುವುದನ್ನು ವಲಯ ಅರಣ್ಯಾಧಿಕಾರಿ ರಾಘವೇಂದ್ರ ರವರ ತಂಡ ಪತ್ತೆ ಹಚ್ಚಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಆರೋಪಿಗಳೆಲ್ಲರೂ ಪರಾರಿಯಾಗಿದ್ದು, ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.