ಪುಂಜಾಲಕಟ್ಟೆ : ಬಿಸಿರೋಡು- ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ಬಾಂಬಿಲ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಆಳದಲ್ಲಿರುವ ಅಡಿಕೆ ತೋಟಕ್ಕೆ ಬಿದ್ದು ಮಹಿಳೆ ಮೃತಪಟ್ಟ ಘಟನೆ ಸೋಮವಾರ (ಅ.14) ಮುಂಜಾನೆ ಸಂಭವಿಸಿದೆ.
ಘಟನೆಯಲ್ಲಿ ಕಾರು ಚಾಲಕ ಗಂಭೀರವಾಗಿ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದು, ಕೊಡಿಯಾಲ್ ಬೈಲು ನಿವಾಸಿ ಭಾಗೀರಥಿ (58) ಮೃತಪಟ್ಟ ಮಹಿಳೆ.
ಕಾರು ಚಾಲನೆ ಮಾಡುತ್ತಿದ್ದ ರೂಪೇಶ್ (40) ಅವರಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ರೂಪೇಶ್ ಅವರ ಪತ್ನಿ ಸುಚಿತ್ರಾ (33) ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಪುಂಜಾಲಕಟ್ಟೆ ಕಡೆಯಿಂದ ಬರುತ್ತಿದ್ದ ಚಾವರ್ ಲೆಟ್ ಸ್ಪಾರ್ಕ್ ಕಾರು ಮುಂಜಾನೆ ಸುಮಾರು 4.30 ಗಂಟೆಗೆ ಬಾಂಬಿಲ ಮಸೀದಿ ಮುಂಭಾಗದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ತೋಟಕ್ಕೆ ಉರುಳಿ ಬಿದ್ದಿದೆ.
ಮೂಲತಃ ಮಂಗಳೂರು ಕೊಡಿಯಾಲ್ ಬೈಲು ನಿವಾಸಿಯಾದ ಪಿಡಬ್ಲ್ಯೂಡಿ ಇಂಜಿನಿಯರ್ ಗೋಪಾಲ ಅವರ ಸಹೋದರಿ ಭಾಗೀರಥಿ ಅವರ ಪುತ್ರಿ ಸುಚಿತ್ರಾ ಮತ್ತು ಅಳಿಯ ರೂಪೇಶ್ ಜೊತೆ ಪ್ರಯಾಣಿಸುತ್ತಿದ್ದರು. ರೂಪೇಶ್ ಅವರು ತುಮಕೂರು ಜಿಲ್ಲೆಯವರಾಗಿದ್ದು, ಭಾಗೀರಥಿ ಅವರು ದಸರಾ ರಜೆಯಲ್ಲಿ ಅಳಿಯ ಮಗಳ ಜೊತೆ ತುಮಕೂರಿಗೆ ಹೋಗಿ ವಾಪಾಸು ಮಂಗಳೂರಿಗೆ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಘಟನಾ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಎಸ್. ಐ.ಸುತೇಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


























