ಬೆಳ್ತಂಗಡಿ: ಕೊರೊನಾ ಕಾರಣದಿಂದಾಗಿ ಕಾಲೇಜುಗಳು ಬಾಗಿಲು ಹಾಕಿವೆ. ಇದರಿಂದಾಗಿ ಆನ್ ಲೈನ್ ನಲ್ಲಿಯೇ ತರಗತಿಗಳು ನಡೆಯುತ್ತಿವೆ. ಇನ್ನೊಂದೆಡೆ ಉದ್ಯೋಗಿಗಳು ವರ್ಕ್ ಫ್ರಂ ಹೋಮ್ ಎಂದು ತಮ್ಮ ಗ್ರಾಮದಲ್ಲಿದ್ದಾರೆ. ಆದರೆ, ನೆಟ್ ವರ್ಕ್ ಸಮಸ್ಯೆಯಿಂದಾಗಿ ಏನು ಮಾಡಬೇಕು ಎಂದು ತೋಚದೇ ಕಂಗಾಲಾಗಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯಾ ಗ್ರಾಮದ ದೇವಗಿರಿ, ಗಂಡಿಬಾಗಿಲು ಸುತ್ತಮುತ್ತ ಪ್ರದೇಶದಲ್ಲಿ ಪದವಿ ವಿದ್ಯಾರ್ಥಿಗಳ ಹಾಗೂ ಉದ್ಯೋಗಿಗಳ ದುಸ್ಥಿತಿ ಇದಾಗಿದೆ. ಒಂದೆಡೆ ಕೊರೊನಾದಿಂದ ಉದ್ಯೋಗ ಕಳೆದುಕೊಂಡಿರುವ ಪೋಷಕರು, ತಮ್ಮ ಕುಟುಂಬ ನಿರ್ವಹಣೆ ಕಷ್ಟವಾದರೂ, ಮಕ್ಕಳ ಕಲಿಕೆಗೆ ತೊಂದರೆಯಾಗ ಬಾರದು ಎಂದು ಮೊಬೈಲ್ ಖರೀದಿಸಿ ನೀಡಿದ್ದಾರೆ. ಆನ್ ಲೈನ್ ಕ್ಲಾಸ್ ಗಾಗಿ ರೀಚಾರ್ಜ್ ಕೂಡ ಮಾಡಿದ್ದಾರೆ. ಆದರೆ, ಈ ಊರಿನಲ್ಲಿ ನೆಟ್ ವರ್ಕ್ ಇಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲು ಸಾಧ್ಯವಾಗದೇ ತೊಂದರೆಗೆ ಸಿಲುಕಿದ್ದಾರೆ.
ಈ ಗ್ರಾಮದಿಂದ ಕೆಲವು ಕಿಲೋ ಮೀಟರ್ ವರೆಗೆ ತೆರಳಿ ಎತ್ತರ ಪ್ರದೇಶದಲ್ಲಿ ಕುಳಿತರೆ ನೆಟ್ ವರ್ಕ್ ಸಿಗುತ್ತದೆ. ಆದರೆ, ಗಾಳಿ ಮಳೆ ನಿರಂತರವಾಗಿ ಬರುತ್ತಿರುವುದರಿಂದ ಹೋಗಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ನೆಟ್ ವರ್ಕ್ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರೆ, ಅವರು ದೂರನ್ನು ಸ್ವೀಕರಿಸುತ್ತೇವೆ ಎನ್ನುತ್ತಾರೆ. ಆದರೆ ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ ಎಂದು ಇಲ್ಲಿನ ವಿದ್ಯಾರ್ಥಿಗಳು ದೂರಿದ್ದಾರೆ.
ಚುನಾವಣೆಯ ಸಂದರ್ಭದಲ್ಲಿ ಈ ಪ್ರದೇಶಕ್ಕೆ ಬಂದ ರಾಜಕಾರಣಿಗಳು ತಮ್ಮ ಪಕ್ಷವನ್ನು ಚುನಾವಣೆಯಲ್ಲಿ ಗೆಲ್ಲಿಸಿದರೆ, ಈ ಪ್ರದೇಶದಲ್ಲಿ ಟವರ್ ನ್ನು ಸ್ಥಾಪಿಸಿ, ಈ ಗ್ರಾಮದ ನೆಟ್ ವರ್ಕ್ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಈ ಬಗ್ಗೆ ಅವರು ಇನ್ನೂ ಸ್ಪಂದಿಸಿಲ್ಲ ಎಂದು ಇಲ್ಲಿನ ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ದೇವಗಿರಿ, ಗಂಡಿಬಾಗಿಲು ಸುತ್ತಮುತ್ತಲಿನ ಈ ಪ್ರದೇಶದಲ್ಲಿ 375 ಮನೆಗಳಿದ್ದು, ಇಲ್ಲಿ 213 ವಿದ್ಯಾರ್ಥಿಗಳಿದ್ದಾರೆ. ಈ ಪ್ರದೇಶದಲ್ಲಿ ನೆಟ್ ವರ್ಕ್ ಸಮಸ್ಯೆಯಿಂದಾಗಿ ಇವರು ತೊಂದರೆಗೀಡಾಗಿದ್ದಾರೆ. ಈ ಸಮಸ್ಯೆಗೆ ಪರಿಹಾರ ಏನು ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ. ನಮ್ಮದಲ್ಲದ ತಪ್ಪಿಗೆ ನಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗಬೇಕೆ? ಎಂದು ಪ್ರಶ್ನಿಸುತ್ತಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ತಕ್ಷಣವೇ ಸ್ಪಂದಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.