ತುಲಾ ಸಂಕ್ರಮಣದ ವಿಶೇಷ ದಿನವಾದ ಇಂದು ಕೊಡಗಿನ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವವಾಗಿದೆ. ಸಾವಿರಾರು ಜನರು ಭಾಗಮಂಡಲದ ತಲಕಾವೇರಿಗೆ ಆಗಮಿಸಿ ಪುಣ್ಯ ಕಾರ್ಯವನ್ನು ಕಣ್ತುಂಬಿಸಿಕೊಂಡಿದ್ದಾರೆ.
ಮುಂಜಾನೆ 7 ಗಂಟೆ 40 ನಿಮಿಷಕ್ಕೆ ಪವಿತ್ರ ಕಾವೇರಿಯ ತೀರ್ಥೋದ್ಭವ ಜರುಗಿತು. ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ವಿಜೃಂಭಣೆಯಿಂದ ಕಾರ್ಯ ನಡೆದಿದೆ. ಭಕ್ತರಿಗಾಗಿ ಕಲ್ಯಾಣಿಯಲ್ಲಿ ಪುಣ್ಯ ಸ್ನಾನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಪ್ರತಿ ವರ್ಷದಂತೆ ಈ ವರ್ಷ ಕೂಡ ತಲಕಾವೇರಿಯಲ್ಲಿ ಸಹಸ್ರಾರು ಭಕ್ತರು ಕಾಣಿಸಿಕೊಂಡಿದ್ದಾರೆ. ಮಳೆ, ಚಳಿ ಎನ್ನದೆ ಪುಣ್ಯಕಾರ್ಯದಲ್ಲಿ ಭಾಗಿಗಳಾಗಿದ್ದಾರೆ. ಇನ್ನು ಒಂದು ತಿಂಗಳ ಕಾಲ ಕಾವೇರಿ ತುಲಾ ಸಂಕ್ರಮಣ ಜಾತ್ರೆಗೆ ನಡೆಯಲಿಕ್ಕಿದೆ.
ಕಾವೇರಿ ಕೊಡಗಿನ ಕುಲದೇವತೆ. ಕನ್ನಡ ನಾಡಿನ ಜೀವನದಿ. ಕಾವೇರಿ ಹುಟ್ಟುವುದೇ ಇಲ್ಲಿಂದ. ದಕ್ಷಿಣ ಭಾರತದ ಗಂಗೆ ಎಂದೇ ಪೂಜಿಸಲ್ಪಡುವ ಕಾವೇರಿ ತೀರ್ಥದಲ್ಲಿ ಮಿಂದರೆ ಸಂಕಷ್ಟ ಪಾವನವಾಗುತ್ತದೆ ಎಂಬ ನಂಬಿಕೆ. ಹಾಗಾಗಿ ಭಕ್ತರು ಈ ಶುಭ ಸಂದರ್ಭದಲ್ಲಿ ತಲಕಾವೇರಿಗೆ ಆಗಮಿಸಿ ತೀರ್ಥೋದ್ಭವದಲ್ಲಿ ಭಾಗಿಯಾಗುತ್ತಾರೆ.