ಚಿಕ್ಕಮಗಳೂರು : ಬೆಳ್ಳಂಬೆಳಗ್ಗೆ ಭಯಂಕರ ವಾಮಾಚಾರಕ್ಕೆ ಕಾಫಿನಾಡಿನ ಮಲೆನಾಡು ಭಾಗ ಅಕ್ಷರಶಃ ಬೆಚ್ಚಿಬಿದ್ದಿದೆ. ಮೂರು ದಾರಿ ಕೂಡಿರುವ ಕಡೆ ಕಿಡಿಗೇಡಿಗಳು ಮಡಿಕೆಗೆ ಮೂರ್ತಿ ರೂಪ ಕೊಟ್ಟು ವಾಮಾಚಾರ ಮಾಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೆಡದಾಳು ಗ್ರಾಮದ ಚೇತನ್ ಎಂಬವರ ಮನೆ ಹಾಗೂ ಚೇತನ್ ಮನೆಯ ಮೂರು ದಾರಿ ಕೂಡಿರುವ ಕಡೆ ವಾಮಾಚಾರ ಮಾಡಿದ್ದಾರೆ. ಒಂದು ಗುಚ್ಚು ಹಸಿರು ಬಳೆಯ ಮೇಲೆ ಮಣ್ಣಿನ ಮಡಕೆ ಕೂರಿಸಿ, ಆ ಮಡಿಕೆಗೆ ಗೊಂಬೆ ರೂಪ ನೀಡಿ ಕಾಳಿಯ ಮುಖದಂತೆ ಮಾಡಿ ಮಾಟ ಮಾಡಿದ್ದಾರೆ ಎನ್ನಲಾಗಿದೆ.
ಬೆಳಗಿನ ಜಾವ 4 ರಿಂದ 5 ಗಂಟೆ ಸುಮಾರಿಗೆ ಐವರು ಕಿಡಿಗೇಡಿಗಳ ಈ ದುಷ್ಕೃತ್ಯವನ್ನ ಸ್ಥಳೀಯರು ತಮ್ಮ ಮನೆಯ ಒಳಭಾಗದಿಂದ ನೋಡಿದ್ದಾರೆ. ಆದರೆ, ಯಾರೋ? ಏನೋ? ಎಂದು ಹೋಗಲು ಭಯಗೊಂಡು ಮನೆಯಲ್ಲೇ ಇದ್ದರು. ಬೆಳಗ್ಗೆ ನೋಡಿದಾಗ ಮಾಟ ಮಾಡಿರುವುದು ಬೆಳಕಿಗೆ ಬಂದಿದೆ.
ಮಾಟದ ಜಾಗದಲ್ಲಿ ಅರಿಶಿನ-ಕುಂಕುಮ, ಹಣ್ಣು-ಕಾಯಿ ಸೇರಿ ವಿವಿಧ ವಸ್ತುಗಳು ಪತ್ತೆಯಾಗಿವೆ. ಸಾಮಾನ್ಯವಾಗಿ ಮಾಟ ಮಾಡುವವರು ಪ್ರಾಣಿ ಬಲಿ ನೀಡಿ ಮಾಟ ಮಾಡುತ್ತಾರೆ. ಆದರೆ ಹಸಿರು ಬಳೆ ಮೇಲೆ ಮಡಿಕೆಗೆ ಮಣ್ಣಿನ ರೂಪದಲ್ಲಿ ಕಾಳಿಯಂತೆ ಮಾಡಿ ವಾಮಾಚಾರ ಮಾಡಿರುವುದರಿಂದ ಸ್ಥಳಿಯರು ಆತಂಕಕ್ಕೀಡಾಗಿದ್ದಾರೆ. ಗ್ರಾಮಸ್ಥರು ಈ ಕುರಿತು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.