ಮಂಗಳೂರು : ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ಸಂಬಂಧಿಸಿ ಸೋಮವಾರ ದಕ್ಷಿಣ ಕನ್ನಡ ಸ್ಥಳೀಯಾಡಳಿತ ಸಂಸ್ಥೆಗಳ ವಿಧಾನ ಪರಿಷತ್ ಉಪಚುನಾವಣೆ ಶಾಂತಿಯುತವಾಗಿ ನಡೆಯಿತು.
ಎರಡೂ ಜಿಲ್ಲೆ ಸೇರಿ ಶೇ.97.91 ಮತದಾನ ದಾಖಲಾಗಿದೆ. ಸ್ಥಳೀಯ ಸಂಸ್ಥೆ ಸದಸ್ಯರು, ಸಂಸದರು, ಶಾಸಕರು ಮತದಾನ ಮಾಡಿದರು.
ಒಟ್ಟು 6,032 ಮತದಾರರ ಪೈಕಿ 5906 ಮಂದಿ ಮತ ಚಲಾಯಿಸಿದರು. ಉಭಯ ಜಿಲ್ಲೆಗಳ 392 ಮತಗಟ್ಟೆಗಳಲ್ಲಿ ಬೆಳಗ್ಗೆ 8 ರಿಂದ ಸಂಜೆ 4 ರವರೆಗೆ ಮತದಾನ ನಡೆಯಿತು.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದರಾಗಿ ಕೋಟ ಶ್ರೀನಿವಾಸ ಪೂಜಾರಿ ಆಯ್ಕೆಯಾದ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ತೆರವಾದ ಸ್ಥಾನಕ್ಕೆ ಮುಂದಿನ ಮೂರು ವರ್ಷಗಳ ಅವಧಿಗೆ ಈ ಚುನಾವಣೆ ನಡೆದಿದೆ.
ಮತದಾರರೆಲ್ಲರೂ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳೇ ಆದ ಕಾರಣ ಬೆಳಗ್ಗಿನಿಂದಲೇ ಬಿರುಸಿನ ಮತದಾನ ನಡೆಯಿತು.
ಮಧ್ಯಾಹ್ನ ವೇಳೆಗಾಗಲೇ ಬಹುತೇಕ ಕಡೆ ಶೇ.90ಕ್ಕಿಂತಲೂ ಹೆಚ್ಚಿನ ಮತದಾನ ನಡೆದಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ, 223 ಗ್ರಾ.ಪಂ., 2 ನಗರಸಭೆ, 3 ಪುರಸಭೆ, 5 ನಗರ ಪಂಚಾಯತ್‌ಗಳ ಬಹುತೇಕ ಸದಸ್ಯರು ಮತದಾನ ಮಾಡಿದರು.
ಪಾಲಿಕೆಯ ಮತಗಟ್ಟೆಯಲ್ಲಿ ಬೆಳಗ್ಗೆಯಿಂದಲೇ ಪಾಲಿಕೆ ಸದಸ್ಯರು ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. 11 ಗಂಟೆ ಬಳಿಕ ಮತಗಟ್ಟೆಗಳು ಬಹುತೇಕ ಖಾಲಿ ಹೊಡೆಯುತ್ತಿದ್ದವು. ಕೆಲವೆಡೆ 12 ಗಂಟೆಯೊಳಗೆ ಎಲ್ಲ ಮತಗಳು ಚಲಾವಣೆಯಾದರೂ ನಿಯಮದಂತೆ ಚುನಾವಣ ಸಿಬ್ಬಂದಿ ಸಂಜೆ 4 ಗಂಟೆವರೆಗೆ ಮತದಾನ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಬೇಕಿತ್ತು.
ಕ್ಷೇತ್ರದಲ್ಲಿ 53 ಸೂಕ್ಷ್ಮ ಮತಗಟ್ಟೆ ಗಳನ್ನು ಗುರುತಿಸಲಾಗಿದ್ದು, ಅಲ್ಲಿ ಸಂಪೂರ್ಣ ವೀಡಿಯೋ ರೆಕಾರ್ಡಿಂಗ್ ವ್ಯವಸ್ಥೆ ಮತ್ತು ಹೆಚ್ಚುವರಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
20ಕ್ಕಿಂತ ಹೆಚ್ಚು ಮತದಾರರಿರುವ ಮತ ಗಟ್ಟೆಗಳಲ್ಲಿ ಸೂಕ್ಷ್ಮ ವೀಕ್ಷಕರನ್ನು ನೇಮಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 540 ಮತ್ತು ಉಡುಪಿ ಜಿಲ್ಲೆಯಲ್ಲಿ 328 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜಿಸಿದ್ದು, ಮತಗಟ್ಟೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.