ಹಾಸನ : ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಅಧಿದೇವತೆ ಹಾಸನಾಂಬೆ ದೇವಿ ಗರ್ಭಗುಡಿಯ ಬಾಗಿಲು ತೆರೆಯಲಾಗಿದೆ. ಮಂಗಳವಾದ್ಯಗಳೊಂದಿಗೆ ಪೂಜಾ ಸಾಮಗ್ರಿಗಳ ಜೊತೆ, ಪ್ರಧಾನ ಅರ್ಚಕ ನಾಗರಾಜ್ ನೇತೃತ್ವದಲ್ಲಿ ಬಾಗಿಲನ್ನು ತೆರೆಯಲಾಯಿತು.
ಎರಡು ಕಡೆಯ ಪೂಜೆಗಾಗಿ ಪೂಜಾ ಸಾಮಾಗ್ರಿ, ಒಡವೆ, ದೇವಿಯ ಅಲಂಕಾರ ಸಾಮಾಗ್ರಿಗಳೊಂದಿಗೆ ಮುತ್ತೈದೆಯರ ಜೊತೆಗೆ ದೇಗುಲಕ್ಕೆ ಪ್ರವೇಶ ಮಾಡಲಾಯಿತು. ಗರ್ಭಗುಡಿ ಬಾಗಿಲು ತೆರೆಯುವ ಮೊದಲು ಗರ್ಭಗುಡಿ ಬಾಗಿಲಿಗೆ ಪೂಜೆ ಮಾಡಲಾಯಿತು.
ಶಾಸ್ತ್ರೋಕ್ತವಾಗಿ ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲು ಮಧ್ಯಾಹ್ನ 12:10ಕ್ಕೆ ತೆರೆಯಲಾಯಿತು. ಅರಸು ವಂಶಸ್ಥ ನಂಜರಾಜೇ ಅರಸ್ ಗೊನೆ ಇರುವ ಬಾಳೆಗೊನೆ ಕಡಿದ ಬಳಿಕ ಗರ್ಭಗುಡಿ ಬಾಗಿಲು ತೆರೆಯಲಾಗಿದೆ. ಗರ್ಭಗುಡಿ ಬಾಗಿಲು ತೆರೆದ ವೇಳೆ ಕಳೆದ ವರ್ಷ ಗರ್ಭಗುಡಿ ಮುಚ್ಚುವ ವೇಳೆ ಹಚ್ಚಿದ್ದ ದೀಪ ಉರಿಯುತ್ತಿತ್ತು. ದೇವರಿಗೆ ಇರಿಸಿದ್ದ ಹೂವು ಕೂಡ ಬಾಡಿರಲಿಲ್ಲ. ದೇವರಿಗೆ ಅರ್ಪಿಸಿದ ನೈವೇದ್ಯ ಕೂಡ ಹಳಸಿರಲಿಲ್ಲ.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಶಾಸಕರುಗಳಾದ ಎಚ್.ಪಿ.ಸ್ವರೂಪ್‌ಪ್ರಕಾಶ್, ಕೆ.ಎಂ.ಶಿವಲಿಂಗೇಗೌಡ, ಸಂಸದ ಶ್ರೇಯಸ್‌ಪಟೇಲ್, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೇತಾ ಸೇರಿದಂತೆ ಜಿಲ್ಲಾಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು.
ಇಂದಿನಿಂದ ನವೆಂಬರ್ 3ರವರೆಗೆ ಹಾಸನಾಂಬ ಜಾತ್ರಾ ಮಹೋತ್ಸವ ಜರುಗಲಿದ್ದು ಮೊದಲ ಹಾಗೂ ಕೊನೆಯ ದಿನ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಉಳಿದ ಒಂಭತ್ತು ದಿನ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶವಿರುತ್ತದೆ.


























