ಬೆಂಗಳೂರು : ಚನ್ನಪಟ್ಟಣ ಉಪಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಸರು ಅಂತಿಮವಾಗಿದೆ. ಅಳೆದು ತೂಗಿ ಲೆಕ್ಕ ಹಾಕಿದ ದಳಪತಿಗಳು ನಿಖಿಲ್ ಕುಮಾರಸ್ವಾಮಿ ಅವರಿಗೆ ಮಣೆ ಹಾಕಿದ್ದಾರೆ.
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ವಿರುದ್ಧ ನಿಖಿಲ್ ಎದುರಾಳಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರ ವಿರುದ್ಧ ಸ್ಪರ್ಧಿಸಿದ ಚುನಾವಣೆ ಅಂತೆಯೇ ಚನ್ನಪಟ್ಟಣ ಉಪಚುನಾವಣೆ ಕೂಡ ಹೈವೋಲ್ಟೇಜ್ ಕದನವಾಗಿ ಮಾರ್ಪಟ್ಟಿದೆ.
ಜೆ.ಪಿ ಭವನದಲ್ಲಿ ಜೆಡಿಎಸ್ ಕಾರ್ಯಕರ್ತರ ಜೊತೆ ಸಭೆ ನಡೆಸಿದ ಹೆಚ್.ಡಿ ದೇವೇಗೌಡರು ಕಾರ್ಯಕರ್ತರ ಒತ್ತಡಕ್ಕೆ ಮಣೆ ಹಾಕಿದ್ದಾರೆ. ಸಭೆ ಬಳಿಕ ಮಾತನಾಡಿದ ದೇವೇಗೌಡರು, ಚನ್ನಪಟ್ಟಣ ಉಪಚುನಾವಣೆಗೆ ನಿಖಿಲ್ ಕುಮಾರಸ್ವಾಮಿಯೇ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣ ಮೈತ್ರಿ ಅಭ್ಯರ್ಥಿ. ನಾಳೆ ಚನ್ನಪಟ್ಟಣದಲ್ಲಿ ನಿಖಿಲ್ ನಾಮಪತ್ರ ಸಲ್ಲಿಕೆ ಮಾಡುತ್ತಾರೆ. ನಾನು ಚನ್ನಪಟ್ಟಣದಲ್ಲೇ ಇದ್ದು ಚುನಾವಣಾ ಪ್ರಚಾರ ಮಾಡುತ್ತೀನಿ. ಕಾರ್ಯಕರ್ತರ ಒತ್ತಾಯದ ಮೇರೆಗೆ ನಿಖಿಲ್ ಅವರನ್ನು ಅಭ್ಯರ್ಥಿಯಾಗಿ ಮಾಡಿದ್ದೇವೆ. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಮನೆಯಲ್ಲಿ ಕುಮಾರಸ್ವಾಮಿ, ಯಡಿಯೂರಪ್ಪ ಅವರು ಪ್ರೆಸ್ ಮೀಟ್ ಮಾಡಿ ಮೈತ್ರಿ ಧರ್ಮದ ಪರವಾಗಿ ಅಭ್ಯರ್ಥಿ ಹೆಸರು ಘೋಷಣೆ ಮಾಡುತ್ತಾರೆ ಎಂದು ಹೆಚ್‌ಡಿಡಿ ಹೇಳಿದ್ದಾರೆ.


























