ಪುತ್ತೂರು : ವಿಶ್ವ ಹಿಂದೂ ಪರಿಷದ್ ಕಾರ್ಯಕ್ರಮದಲ್ಲಿ ನಡೆದ ಘಟನೆ ಬಗ್ಗೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಖಂಡನೆ ವ್ಯಕ್ತಪಡಿಸಿದೆ.
ಸರಿ ಸುಮಾರು ಒಂದು ವರ್ಷಗಳ ಹಿಂದೆ ಪುತ್ತೂರಿನಲ್ಲಿ ಉದಯಿಸಿದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ಕ್ಷಿಪ್ರ ಅವಧಿಯಲ್ಲಿ ಧಾರ್ಮಿಕ, ಶೈಕ್ಷಣಿಕ, ಆರೋಗ್ಯ, ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಿದೆ. ಉಚಿತ ವೈದ್ಯಕೀಯ ಶಿಬಿರ, ಬಡ ವಿಧ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹಿಸಲು ಆರ್ಥಿಕ ಸಹಾಯ, ಸೂರು ಇಲ್ಲದವರಿಗೆ ಸೂರು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ಕುಟುಂಬಗಳಿಗೆ ಆರ್ಥಿಕ ಸಹಕಾರ., ಹೀಗೆ ಹತ್ತು ಹಲವು ಸಾಮಾಜಿಕ ಸೇವೆಗಳಿಗಾಗಿ ಸುಮಾರು 15 ಲಕ್ಷ ರೂಪಾಯಿಗೂ ಮಿಕ್ಕಿ ಧನಸಹಾಯ ವಿತರಣೆ ಮಾಡಿರುತ್ತೇವೆ.
ಹಿಂದೂಗಳಲ್ಲಿ ಧಾರ್ಮಿಕ ಭಾವನೆಯನ್ನು ಜಾಗೃತವಾಗಿರಿಸಲು ಸೇವಾ ಟ್ರಸ್ಟ್ ತಾಲೂಕಿನ ವಿವಿದೆಡೆ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಈಗಾಗಲೇ ಹಮ್ಮಿಕೊಂಡಿದೆ. ಸಹಸ್ರಾರು ಜನರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಧನ್ಯತಾ ಭಾವ ಮೂಡಿಸಿದೆ.
ಈ ಎಲ್ಲ ಕಾರ್ಯಕ್ರಮಗಳಿಗೆ ಬೆಂಬಲಿಗರ ಹಾಗೂ ಸಾರ್ವಜನಿಕರ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಮುಂದೆಯೂ ಎಲ್ಲಾ ಕ್ಷೇತ್ರಗಳಲ್ಲಿ ಇದೇ ರೀತಿಯ ಸೇವೆಯನ್ನು ಸಹಕಾರವನ್ನು ಪಾರದರ್ಶಕವಾಗಿ ನಿಸ್ವಾರ್ಥ ಭಾವದಿಂದ ಟ್ರಸ್ಟ್ ನೀಡಲಿದೆ. ಆದರೇ ಕಳೆದ 35 ವರ್ಷಗಳಿಂದ ಹಿಂದುತ್ವಕ್ಕಾಗಿ ದುಡಿಯುತ್ತಿರುವ, ಸಂಘ ಪರಿವಾರ ಮತ್ತು ಹಿರಿಯರ ಅಪೇಕ್ಷೆ ಮೇರೆಗೆ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್‌ನ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ ಅರುಣ್ ಕುಮಾರ್ ಪುತ್ತಿಲ ಹಾಗೂ ಪಕ್ಷದ ವಿವಿಧ ಜವಾಬ್ದಾರಿ ವಹಿಸಿದ ಕಾರ್ಯಕರ್ತರು, 23-10-2024 ರಂದು ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾ ಕಾರ್ಯಾಲಯದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಗಮಿಸಿದಾಗ ನಡೆದ ಘಟನೆ ಇಡೀ ಹಿಂದೂ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ. ಸಂಸ್ಥಾಪಕರು ಹಾಗೂ ಅವರ ಜೊತೆ ಇದ್ದ ಕಾರ್ಯಕರ್ತರನ್ನು ತಡೆದ ಕೃತ್ಯವನ್ನು ಟ್ರಸ್ಟ್ ಖಂಡಿಸುತ್ತದೆ. ಟ್ರಸ್ಟ್‌ನ ಸಮಸ್ತ ಹಿತೈಷಿಗಳು ಅವರ ಜೊತೆ ಗಟ್ಟಿಯಾಗಿ ಧೃಡವಾಗಿ ನಿಲ್ಲಲ್ಲಿದ್ದೇವೆ. ತಡೆಯೊಡ್ಡಿದ ವ್ಯಕ್ತಿಗಳು ಹಾಗೂ ಅವರ ಹಿಂದಿರುವ ಶಕ್ತಿಗಳಲ್ಲಿ ಹಲವರಿಗೆ ಸಂಘಟನೆಗಳಲ್ಲಿ ವಿವಿಧ ಜವಾಬ್ದಾರಿ ಇರುವುದು ದುರ್ದೈವದ ಸಂಗತಿಯಾಗಿದೆ. ಇವರ ವಿರುದ್ಧ ಸಂಘಟನೆಯ ಹಿರಿಯರು ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿ.ಹಿಂ.ಪ, ಹಿಂ.ಜಾ.ವೇ ಪರಿವಾರ ಸಂಘಟನೆಗಳು ಮಾಡಿದ ಸೇವೆಗಳ ಬಗ್ಗೆ ಅಪಾರ ಗೌರವವಿದೆ. ಎಲ್ಲ ಕಾರ್ಯಕರ್ತರು ಹಿಂದಿನ ದಿನಗಳಲ್ಲಿ ಪರಿವಾರ ಸಂಘಟನೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ ಕಾರ್ಯಕರ್ತರೆ ಪ್ರೇರಣಾ ಶಕ್ತಿಯಾಗಿ ಟ್ರಸ್ಟ್‌ನ ಜೊತೆ ನಿಂತಿದ್ದಾರೆ.
ಮೊನ್ನೆ ಘಟನೆ ನಡೆದ ನಂತರವು ಸಾಮಾಜಿಕ ಜಾಲತಾಣಗಳಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಸ್ಥಾಪಿತ ಹಿತಾಸಕ್ತಿಗಳು ಮಾಡುವುದು ಕಂಡು ಬಂದಿದೆ. ಇದು ಟ್ರಸ್ಟ್‌ನ ಬೆಂಬಲಿಗರಲ್ಲಿ ಆಕ್ರೋಶ ಉಂಟು ಮಾಡಿದೆ. ಇನ್ನೊಮ್ಮೆ ಇಂತಹ ಘಟನೆ ಮರುಕಳಿಸಿದರೆ ಆಗ ಬೆಂಬಲಿಗರ ಭಾವನೆಗಳನ್ನು ನಿಯಂತ್ರಿಸುವುದು ಕಷ್ಟ ಸಾಧ್ಯವಾಗಬಹುದು ಮತ್ತು ಅದು ಬೇರೆಯ ಆಯಾಮ ಪಡೆಯುವ ಅಪಾಯವು ಇದೆ. ಈಗಾಗಲೇ ಪಕ್ಷದ ಅನ್ಯನ್ಯ ಜವಾಬ್ದಾರಿ ವಹಿಸಿಕೊಂಡ ಹಲವಾರು ಕಾರ್ಯಕರ್ತರು ಕೂಡಾ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸದಸ್ಯರು ಎಂಬುದು ತಿಳಿದ ವಿಷಯ. ಸಹಸ್ರಾರು ಕಾರ್ಯಕರ್ತರ ನೋವುಗಳಿಗೆ ಸ್ಪಂದಿಸುವ ಮೂಲಕ ಸಮಾಜದಲ್ಲಿ ಸನಾತನ ಧರ್ಮ ಹಾಗೂ ಹಿಂದುತ್ವದ ಕಾಳಜಿ ಹೆಚ್ಚಿಸುವ ಕಾರ್ಯ ಮಾಡಿದವರು ಅರುಣ್ ಕುಮಾರ್ ಪುತ್ತಿಲ. ಅವರ ಜೊತೆ ಸಹಸ್ರಾರು ಕಾರ್ಯಕರ್ತರಿದ್ದಾರೆ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡುವ ಅಗತ್ಯ ಇಲ್ಲ. ಈ ಎಲ್ಲ ವಿಷಯಗಳನ್ನು ಮನಗಂಡು ಸಂಘಟನೆಯ ಹಿರಿಯರು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.