ಕಾಸರಗೋಡು: ನೀಲೇಶ್ವರಂ ಬಳಿ ದೇವಸ್ಥಾನದ ಉತ್ಸವದ ವೇಳೆ ಪಟಾಕಿ ದುರಂತ ಸಂಭವಿಸಿದ್ದು, 150 ಮಂದಿ ಗಾಯಗೊಂಡಿದ್ದು 8 ಮಂದಿಯ ಸ್ಥಿತಿ ಗಂಭೀರವಾಗಿದೆ.
ಗಾಯಾಳುಗಳನ್ನು ಕಾಸರಗೋಡು, ಕಣ್ಣೂರು ಮತ್ತು ಮಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೀರರ್ಕಾವು ದೇವಸ್ಥಾನದ ಬಳಿಯ ಪಟಾಕಿ ಸಂಗ್ರಹಾಗಾರಕ್ಕೆ ಬೆಂಕಿ ತಗುಲಿ ಈ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಮಂಗಳವಾರ ಮಧ್ಯರಾತ್ರಿ 12:30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಜಿಲ್ಲಾಡಳಿತದ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.
ದೇವಸ್ಥಾನದ ಅಧಿಕಾರಿಗಳು ಪಟಾಕಿ ಸಿಡಿಸಲು ಅನುಮತಿ ಪಡೆದಿದರಲಿಲ್ಲ. ಪೊಲೀಸರು ದೇವಸ್ಥಾನದ ಅಧಿಕಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪ್ರಾಥಮಿಕ ತನಿಖೆ ಈಗಾಗಲೇ ಆರಂಭವಾಗಿದೆ ಎಂದು ಕಾಸರಗೋಡು ಜಿಲ್ಲಾಧಿಕಾರಿ ಕೆ ಇಂಬಶೇಖರ್ ಹೇಳಿದ್ದಾರೆ.
ದೇವಾಲಯದ ಗೋಡೆಗೆ ಹೊಂದಿಕೊಂಡಂತೆ ನಿರ್ಮಿಸಲಾದ ತಾತ್ಕಾಲಿಕ ಶೆಡ್‌ನಲ್ಲಿ ಪಟಾಕಿಗಳನ್ನು ಸಂಗ್ರಹಿಸಿಡಲಾಗಿತ್ತು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಮೂವಳಂಕುಜಿ ಚಾಮುಂಡಿ ತೆಯ್ಯಂನ ‘ವೆಳ್ಳಟ್ಟಂ ಪುರಪ್ಪಡು’ಗೆ ಸಂಬಂಧಿಸಿದಂತೆ ಪಟಾಕಿ ಸಿಡಿಸುವ ವೇಳೆ ಈ ದುರಂತ ಸಂಭವಿಸಿದೆ.
ಪಟಾಕಿ ಸಿಡಿದು ಸ್ಫೋಟಕಗಳನ್ನು ಸಂಗ್ರಹಿಸಿಟ್ಟಿದ್ದ ಕಟ್ಟಡದ ಮೇಲೆ ಬಿದ್ದಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ. ತೆಯ್ಯಂ ಪ್ರದರ್ಶನವನ್ನು ವೀಕ್ಷಿಸಲು ಬಂದಿದ್ದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವಾರು ಮಂದಿ ಗಾಯಗೊಂಡಿದ್ದಾರೆ.