ಉಡುಪಿ : ಸ್ಕೂಟಿ ಸವಾರೆಯ ಮೇಲೆ ಮಣ್ಣು ತುಂಬಿದ ಟಿಪ್ಪರ್ ಲಾರಿ ಮಗುಚಿ ಬಿದ್ದ ಘಟನೆ ಉಡುಪಿಯಲ್ಲಿ ನಡೆದಿದ್ದು, ಆಟೋ ಡ್ರೈವರ್ ನ ಸಮಯಪ್ರಜ್ಞೆಯಿಂದ ಮಹಿಳೆಯ ಪ್ರಾಣ ಉಳಿದಿದೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾಗೂರು ಉಪ್ರಳ್ಳಿ ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಒಳ ರಸ್ತೆಯ ತಿರುವಿನಲ್ಲಿ ಮಣ್ಣು ತುಂಬಿದ ಟಿಪ್ಪರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅದೇ ಸಂದರ್ಭದಲ್ಲಿ ಲಾರಿಯ ಪಕ್ಕದಲ್ಲೇ ಸ್ಕೂಟಿ ಚಲಿಸುತ್ತಿದ್ದು, ಟಿಪ್ಪರ್ ಸ್ಕೂಟಿಯ ಮೇಲೆ ಮಗುಚಿ ಬಿದ್ದು, ಮಣ್ಣಿನ ಅಡಿಯಲ್ಲಿ ಸ್ಕೂಟಿ ಸಮೇತ ಸವಾರೆ ಸಿಲುಕಿಕೊಂಡರು. ಪಲ್ಟಿಯಾದ ಲಾರಿಯಿಂದ ಚಾಲಕನಿಗೆ ಹೊರಬರಲು ಸಾಧ್ಯವಾಗದೆ ಇದ್ದು. ಈ ಸಂದರ್ಭ ಅದೇ ದಾರಿಯಲ್ಲಿ ಬಂದ ರಿಕ್ಷಾ ಚಾಲಕ ಈ ಘಟನೆಯನ್ನು ಗಮನಿಸಿದ್ದಾರೆ.
ಮಹಿಳೆಯ ರಕ್ಷಣೆಗೆ ಮುಂದಾಗಿದ್ದಾರೆ. ಮಣ್ಣಿನಲ್ಲಿ ಮುಖ ಸಂಪೂರ್ಣ ಮುಚ್ಚಿ ಹೋಗಿದ್ದ ಮಹಿಳೆಯನ್ನು ರಕ್ಷಿಸಲು ಕೈಗಳಿಂದಲೇ ಮಣ್ಣನ್ನು ಅಗೆದು ತೆಗೆದು ಮಹಿಳೆಯ ತಲೆಯ ಭಾಗದ ಮಣ್ಣನ್ನು ಸರಿಸಿದ್ದಾರೆ. ಅಷ್ಟರಲ್ಲಾಗಲೇ ಸ್ಥಳೀಯರು ಸ್ಥಳಕ್ಕೆ ಆಗಮಿಸಿದ್ದು, ಸ್ಥಳೀಯರ ಸಹಕಾರದಿಂದ ಮಣ್ಣಿನಡಿಯಿಂದ ಮಹಿಳೆಯನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಕಳುಹಿಸಲಾಯಿತು. ಬಳಿಕ ಸ್ಕೂಟಿಯನ್ನು ಕೂಡ ಮಣ್ಣಿನಡಿಯಿಂದ ಮೇಲಕ್ಕೆತ್ತಲಾಯಿತು. ಅಶೋಕ್ ಅವರ ಸಮಯಪ್ರಜ್ಞೆ ಹಾಗೂ ಸಕಾಲಿಕ ನೆರವು ಮಹಿಳೆಯ ಪ್ರಾಣ ಉಳಿಸಿದೆ.