ಮಂಗಳೂರು: ಜಾಗತಿಕ ದೈತ್ಯ ಅಮೆಜಾನ್ ಕಂಪನಿಗೆ ಬರೋಬ್ಬರಿ 30 ಕೋಟಿ ಪಂಗನಾಮ ಹಾಕಿದ ಕಿರಾತಕರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರಾಜಸ್ಥಾನದ ಧೋಪುರ್ ಜಿಲ್ಲೆಯ ನಿವಾಸಿ ರಾಜ್ ಕುಮಾರ್ ಮೀನಾ (23), ಕರೌಲಿ ಜಿಲ್ಲೆಯ ಸುಭಾಸ್ ಗುರ್ಜರ್ (27) ಎಂದು ಗುರುತಿಸಲಾಗಿದೆ.
ರಾಜ್ ಕುಮಾರ್ ಮತ್ತು ಸುಭಾಸ್ ಗುರ್ಜರ್ ದಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ಸ್ ಆಗಿದ್ದು, ಅಮೆಜಾನ್ ಕಂಪನಿಯ ನಿಯಮಗಳನ್ನೇ ಬಂಡವಾಳ ಮಾಡಿಕೊಂಡು ವಂಚಿಸಿದ್ದಾರೆ. ಸದ್ಯ ರಾಜಸ್ಥಾನ ಮೂಲದ ಇಬ್ಬರು ಖದೀಮರನ್ನು ಮಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಅಮೆಜಾನ್ ಕಂಪನಿಯ ಆನ್ಲೈನ್ ಮೂಲಕ ವಿವಿಧ ರೀತಿಯ ಬೆಲೆಬಾಳುವ ಸಾಮಾಗ್ರಿಗಳನ್ನು ಖರೀದಿಸಿ ವಂಚಿಸುತ್ತಿದ್ದರು. ತಮಿಳುನಾಡು, ಕೇರಳ, ಅಸ್ಸಾಂ, ಕರ್ನಾಟಕ, ದೆಹಲಿ, ಉತ್ತರ ಪ್ರದೇಶ, ಬಿಹಾರ ಸೇರಿದಂತೆ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ವಂಚನೆ ಮಾಡಿದ್ದಾರೆ.
ವಸ್ತುಗಳ ಡೆಲಿವರಿ ಪಡೆಯಲು ಟೈಯರ್ ಟು ಸಿಟಿ ಲೊಕೇಶನ್ ಆಯ್ಕೆ ಮಾಡುತ್ತಿದ್ದರು. ಬುಕ್ ಮಾಡಿದ ವಸ್ತುಗಳನ್ನು ಡೆಲಿವರಿ ಪಡೆಯಲು ವಿಮಾನದಲ್ಲಿ ಬರುತ್ತಿದ್ದರು. ಐಟಂ ಬಾಕ್ಸಿನ ಟ್ರ್ಯಾಕಿಂಗ್ ಐಡಿಯನ್ನು ಅದಲು ಬದಲು ಮಾಡಿ ಅಮೆಜಾನ್ ಸಂಸ್ಥೆಗೆ ವಂಚಿಸುತಿದ್ದರು. ಹೀಗೆ 4-5 ವರ್ಷದಲ್ಲಿ ಇವರು ಅಮೆಜಾನ್ನಿಂದ ಬರೊಬ್ಬರಿ 30 ಕೋಟಿ ದೋಚಿದ್ದಾರೆ.
ಮಂಗಳೂರಿನ ಉರ್ವಾ ಠಾಣೆಯಲ್ಲಿ ಸೆ.21ರಂದು ಪ್ರಕರಣ ದಾಖಲಿದೆ. ಅಮೆಜಾನ್ ಕಂಪನಿಯ ಡೆಲಿವರಿ ಪಾರ್ಟನ್ ಈ ಪ್ರಕರಣವನ್ನು ದಾಖಲಿಸಿದ್ದಾರೆ. ಖತರ್ನಾಕ್ ಕ್ರಿಮಿನಲ್ಸ್ ಹಿಡಿಯಲು ಬಲೆ ಬೀಸಿದ ಪೊಲೀಸರು ಕೊನೆ ಅವರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.