ಕಂಡ ಕಂಡ ಭೂಮಿಯೆಲ್ಲಾ ನಂದು ಎಂದ ವಕ್ಫ್ ಬೋರ್ಡ್ಗೆ ಕೊನೆಗೂ ಸಿಎಂ ಸಿದ್ದರಾಮಯ್ಯ ಅಂಕುಶ ಹಾಕಿದ್ದಾರೆ. ರೈತರಿಗೆ ನೀಡಿರುವ ನೋಟಿಸ್ ವಾಪಸ್ ಪಡೆಯುವಂತೆ ಸೂಚಿಸಿದ್ದಾರೆ.
ಸಿಎಂ ನಿರ್ಧಾರವನ್ನ ರೈತ ನಾಯಕರು ಸ್ವಾಗತಿಸಿದ್ದಾರೆ. ಈ ಮಧ್ಯೆ ಕಾಂಗ್ರೆಸ್-ಬಿಜೆಪಿ ನಡುವೆ ವಕ್ಫ್ ವಾಕ್ಸಮರ ಮುಂದುವರಿದಿದೆ.
ವಕ್ಫ್ ಭೂವ್ಯೂಹ ರಾಜ್ಯದೆಲ್ಲೆಡೆ ವ್ಯಾಪಿಸಿ ರಾಜಕೀಯ ವಾಕ್ಸಮರಕ್ಕೂ ಕಾರಣವಾಗಿದೆ. ಎಲ್ಲಾ ಸಮುದಾಯದ ಜಮೀನು ಕಬಳಿಸುತ್ತಿರುವ ಆರೋಪದ ನಡುವೆ ಎಂಟ್ರಿ ಕೊಟ್ಟ ಸಿಎಂ ಸಿದ್ದರಾಮಯ್ಯ ವಕ್ಫ್ ಕಪಟ ನಾಟಕ ಗದ್ದಲಕ್ಕೆ ತೆರೆ ಎಳೆದಿದ್ದಾರೆ.
ವಕ್ಫ್ ಭೂ ಕಬಳಿಕೆ ಯತ್ನಕ್ಕೆ ಸರ್ಕಾರ ಬ್ರೇಕ್ ಹಾಕಿದೆ. ಈ ಜಮೀನು ನಮ್ಮದು ಅಂತ ಅನ್ನದಾತರಿಗೆ ವಕ್ಫ್ ಬೋರ್ಡ್ ನೀಡಿರುವ ನೋಟಿಸ್ ತಕ್ಷಣವೇ ವಾಪಸ್ ಪಡೆಯುವಂತೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ.
ಪಹಣಿಯಲ್ಲಿ ಆಗಿರುವ ತಿದ್ದುಪಡಿಗಳನ್ನೂ ಕೂಡ ರದ್ದು ಮಾಡಲು ಸೂಚಿಸಿದ್ದಾರೆ. ಸಿಎಂ ಸಿದ್ದರಾಮಯ್ಯರ ಈ ನಡೆಯನ್ನು ರೈತ ನಾಯಕರು ಸ್ವಾಗತಿಸಿದ್ದಾರೆ.
ಇನ್ನು ವಿಜಯಪುರದಲ್ಲಿ ವಕ್ಫ್ ಆಸ್ತಿ ಗದ್ದಲದ ಬಗ್ಗೆ ಆಹೋರಾತ್ರಿ ಹೋರಾಟ ನಡೆದಿತ್ತು. ಇದೀಗ ಸಿಎಂ ಮಾತಿನಿಂದ ಖುಷಿಯಾದ ರೈತರು, ವಿಜಯಪುರದ ಡಿಸಿ ಕಚೇರಿ ಮುಂಭಾಗ ಸಂಭ್ರಮಾಚರಣೆ ಮಾಡಿದ್ದಾರೆ. ಹಾಗೂ ವಕ್ಫ್ ಅಧಿಕಾರಿಗಳು ಮತ್ತೆ ನೋಟಿಸ್ ನೀಡಿದ್ರೆ, ಹೋರಾಟಕ್ಕೆ ಇಳಿಯುವುದಾಗಿ ಎಚ್ಚರಿಕೆ ನೀಡಿದ್ದಾರೆ.
ತಮ್ಮ ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿದ್ದನ್ನು ಕಂಡಿದ್ದ ರೈತರು ಕಂಗಾಲಾಗಿದ್ದರು. ಸದ್ಯ ನೋಟಿಸ್ ವಾಪಸ್ ಪಡೆಯುವಂತೆ ಸಿಎಂ ಸೂಚಿಸಿದ್ದು ಅನ್ನದಾತರು ನಿಟ್ಟುಸಿರುವ ಬಿಟ್ಟಿದ್ದಾರೆ.