ಮಂಗಳೂರು: ಮಂಗಳೂರು ಸಿಸಿಬಿ ಪೊಲೀಸರು ಶುಕ್ರವಾರ ನಡೆಸಿದ ಕಾರ್ಯಾಚರಣೆಯಲ್ಲಿ ನಗರಕ್ಕೆ ವಿದೇಶದಿಂದ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದ ಆರೋಪಿಯೋರ್ವನನ್ನು ಬಂಧಿಸಿ, ಆತನಿಂದ 30 ಲಕ್ಷ ರೂ. ಮೌಲ್ಯದ ಹೈಡೋವೀಡ್ ಗಾಂಜಾ, 2.5 ಕೆಜಿ ಗಾಂಜಾ ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪುತ್ತೂರು ಹಾರಾಡಿ ಮೂಲದವನಾಗಿದ್ದು ಪ್ರಸ್ತುತ ತೊಕ್ಕೊಟ್ಟು ಚೊಂಬುಗುಡ್ಡೆ ಮಸೀದಿ ಹತ್ತಿರದ ನಿವಾಸಿ ಎಚ್. ಮೊಹಮ್ಮದ್ ಹಫೀಜ್ (23) ಬಂಧಿತ ಆರೋಪಿ.

ನಗರದ ಕುದ್ರೋಳಿ ಪರಿಸರದಲ್ಲಿ ಹೈಡೋವೀಡ್ ಗಾಂಜಾ ಮತ್ತು ಗಾಂಜಾವನ್ನು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಖಚಿತ ಮಾಹಿತಿ ಮೇರೆಗೆ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಈತನ ವಶದಿಂದ 30 ಲಕ್ಷ ರೂಪಾಯಿ ಮೌಲ್ಯದ 300 ಗ್ರಾಂ ಹೈಡೋವೀಡ್ ಗಾಂಜಾ ಹಾಗೂ 75,000 ರೂ.ಮೌಲ್ಯದ 2.5 ಕೆಜಿ ಗಾಂಜಾ, ಮೊಬೈಲ್ ಫೋನ್, ಡಿಜಿಟಲ್ ತೂಕ ಮಾಪಕವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯಿಂದ ಅಂದಾಜು 30,85,500 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.