ಬೆಂಗಳೂರು: ಕೆಂಗೇರಿ ಬಸ್ ನಿಲ್ದಾಣದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಇಡೀ ಸಿಲಿಕಾನ್ ಸಿಟಿ ಜನರನ್ನೇ ಬೆಚ್ಚಿ ಬೀಳಿಸಿದೆ. ಸಣ್ಣದೊಂದು ತಪ್ಪು ಮಾಡದ 30 ವರ್ಷದ ಟೆಕ್ಕಿ ಸಂಧ್ಯಾ ಅವರು ಕುಡಿದು ಬೆನ್ಜ್ ಕಾರು ಓಡಿಸುತ್ತಿದ್ದವರ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಸಂಧ್ಯಾ ಅವರ ಈ ದುರಂತ ಸಾವು ಸ್ನೇಹಿತರು, ಕುಟಂಬಸ್ಥರಿಗೆ ಭರಿಸಲಾರದ ನಷ್ಟವನ್ನುಂಟು ಮಾಡಿದೆ.
ನಿನ್ನೆ ಸಂಜೆ ಆರೋಪಿ ಧನುಷ್ ಹಾಗೂ ಗೆಳೆಯರು ಕುಡಿದು ಬೆನ್ಜ್ ಕಾರು ಚಾಲನೆ ಮಾಡುತ್ತಿದ್ದರು. ಕೆಂಗೇರಿ ಬಸ್ ನಿಲ್ದಾಣದ ಬಳಿ ಟೆಕ್ಕಿ ಸಂಧ್ಯಾ ಅವರು ರಸ್ತೆ ಕ್ರಾಸ್ ಮಾಡುತ್ತಿದ್ದರು. ಸ್ಪೀಡಾಗಿ ಬರ್ತಿದ್ದ ಬೆನ್ಜ್ ಕಾರು ಟೆಕ್ಕಿ ಸಂಧ್ಯಾಗೆ ಗುದ್ದಿದೆ. ಬೆನ್ಜ್ ಕಾರು ಗುದ್ದಿದ ರಭಸಕ್ಕೆ ಮೇಲೆ ಹಾರಿದ ಸಂಧ್ಯಾ ಅವರ ದೇಹವೇ ನುಜ್ಜುಗುಜ್ಜಾಗಿದೆ.
ಆರೋಪಿ ಧನುಷ್ ಹಾಗೂ ಗೆಳೆಯರು ಭರ್ಜರಿ ಪಾರ್ಟಿ ಮುಗಿಸಿ ರೋಡ್‌ನಲ್ಲಿ ವೇಗದಲ್ಲಿ ಡ್ರೈವಿಂಗ್ ಮಾಡುತ್ತಿದ್ದರು. ಕುಡಿದು ಬೆನ್ಜ್ ಕಾರು ಚಾಲನೆ ಮಾಡುತ್ತಿದ್ದ ವೇಳೆ ಈ ಭೀಕರ ಅಪಘಾತ ಸಂಭವಿಸಿದೆ ಎಂದು ಸಂಧ್ಯಾ ಸ್ನೇಹಿತರು, ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.
ಸಂಧ್ಯಾ ಅವರು ತನ್ನ ಕೆಲಸ ಮುಗಿಸಿ ಮನೆಗೆ ಹೊರಟಿದ್ದು ಕೆಂಗೇರಿ ಬಸ್ ನಿಲ್ದಾಣ ಬಳಿ ಈ ಅಪಘಾತ ನಡೆದಿದೆ. ಅಪಘಾತದ ಬಳಿಕ ಸಂಧ್ಯಾ ಅವರಿಗೆ ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಸಂಧ್ಯಾ ಸ್ನೇಹಿತರು, ಸ್ಥಳೀಯರು ಬಿಜಿಎಸ್ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಸಂಧ್ಯಾ ಒಬ್ಬರಿಗೇ ಅಲ್ಲ ಮುಂದೆ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೂ ಬೆನ್ಜ್ ಕಾರು ಡಿಕ್ಕಿ ಹೊಡೆದಿದೆ. ದ್ವಿಚಕ್ರ ವಾಹನದಲ್ಲಿ ಹೋಗ್ತಿದ್ದ ಸೈಯ್ಯದ್ ಎಂಬ ವ್ಯಕ್ತಿಗೂ ಗಾಯಗಳಾಗಿದ್ದು, ಕುಡಿದ ಮತ್ತಲ್ಲಿ ಅತಿವೇಗವಾಗಿ ಚಾಲನೆ ಮಾಡಿದ್ದೇ ಈ ದುರಂತಕ್ಕೆ ಕಾರಣ ಎಂದು ಹೇಳಲಾಗಿದೆ.
ಡ್ರಿಂಕ್ & ಡ್ರೈವ್‌ಗೆ ಆರೋಪಿಗಳು ಅಂದರ್!
ಕೆಂಗೇರಿ ಬಸ್ ನಿಲ್ದಾಣದ ಬಳಿ ಅತ್ಯಂತ ವೇಗವಾಗಿ ಬೆನ್ಜ್ ಕಾರು ಓಡಿಸುತ್ತಿದ್ದ ಆರೋಪಿ ಧನುಷ್ ಹಾಗೂ ಸ್ನೇಹಿತರು ಅಪಘಾತವೆಸಗಿ ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಸಂಧ್ಯಾಗೆ ಗುದ್ದಿದ ಬಳಿಕ ಕಾರು ನಿಲ್ಲಿಸದೇ ಪರಾರಿಯಾಗೋದಕ್ಕೆ ಯತ್ನಿಸಿದ್ದರು.
ಈ ಅಪಘಾತದ ಬಳಿಕ ಸ್ಥಳೀಯರು ಪರಾರಿಯಾಗುತ್ತಿದ್ದ ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಾರಿನಲ್ಲಿ ತೆರಳ್ತಿದ್ದ ವೇಳೆ ಆರೋಪಿ ಧನುಷ್ ಹಾಗೂ ಸ್ನೇಹಿತರು ಕುಡಿದ ಅಮಲಿನಲ್ಲಿದ್ದರು. ಅಪಘಾತದ ಬಳಿಕ ಪೊಲೀಸರ ಪರಿಶೀಲನೆಯಲ್ಲೂ ಆರೋಪಿಗಳು ಕುಡಿದಿರೋದು ಪತ್ತೆಯಾಗಿದೆ. BNS 105 ಅಡಿಯಲ್ಲಿ ಆರೋಪಿ ಧನುಷ್ ವಿರುದ್ಧ ಪೊಲೀಸರು ಕೇಸ್ ದಾಖಲು ಮಾಡಿದ್ದಾರೆ. ಅಪಘಾತಕ್ಕೆ ಕಾರಣವಾದ ಬೆನ್ಜ್ ಕಾರನ್ನು ವಶಕ್ಕೆ ಪಡೆದಿದ್ದಾರೆ.