ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂರು ಪ್ರಥಮ ದರ್ಜೆ ಕಾಲೇಜುಗಳಿಗೆ ಒಟ್ಟು ೪ ಕೋಟಿ ಅನುದಾನವನ್ನು ಸರಕಾರ ಬಿಡುಗಡೆ ಮಾಡಿದೆ.
ಉನ್ನತ ಶಿಕ್ಷಣ ವ್ಯಾಪ್ತಿಗೆ ಒಳಪಡುವ ಕಾಲೇಜು ಶಿಕ್ಷಣ ಇಲಾಖೆಯಿಂದ ಈ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.
ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ೧ ಕೋಟಿ, ಪುತ್ತೂರು ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ೧ ಕೋಟಿ ಹಾಗೂ ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿಗೆ ೨ ಕೋಟಿ ಹೀಗೆ ಒಟ್ಟು ನಾಲ್ಕು ಕೋಟಿ ಅನುದಾನವನ್ನು ಪುತ್ತೂರು ಶಾಸಕರಾದ ಅಶೋಕ್ ರೈ ಶಿಫಾರಸ್ಸಿನಂತೆ ಇಲಾಖೆ ಬಿಡುಗಡೆ ಮಾಡಿದೆ.
ಯಾವುದಕ್ಕೆ ಬಳಕೆ
ಅನುದಾನವನ್ನು ಕಾಲೇಜು ತರಗತಿ ಕೊಠಡಿ ನಿರ್ಮಾಣಕ್ಕೆ, ಶೌಚಾಲಯ ನಿರ್ಮಾಣಕ್ಕೆ, ಮಹಿಳಾ ವಿಶ್ರಾಂತಿ ಕೊಠಡಿ ಗೆ, ಪ್ರಯೋಗಾಲಯಕ್ಕೆ, ಗ್ರಂಥಾಲಯಕ್ಕೆ ಅಥವಾ ಅಗತ್ಯವಿದ್ದಲ್ಲಿ ಅಡಿಟೋರಿಯಂ ನಿರ್ಮಾಣಕ್ಕೆ ಮಾತ್ರ ಬಳಸಬಹುದಾಗಿದೆ ಎಂದು ಸೂಚನೆಯನ್ನು ನೀಡಲಾಗಿದೆ. ಈಗಾಗಲೇ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಮೂರು ಪ್ರಥಮ ದರ್ಜೆ ಕಾಲೇಜುಗಳಿಂದ ಮೂಲಸೌಕರ್ಯ ಅಭಿವೃದ್ದಿಗೆ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಶಾಸಕರಾದ ಅಶೋಕ್ ರೈ ಅವರು ಸರಕಾರದ ಗಮನಕ್ಕೆ ತಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉನ್ನತ ಶಿಕ್ಷಣ ಸಚಿವರಲ್ಲಿ ಮನವಿ ಮಾಡಿದ್ದರು.
ತನ್ನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೆಟ್ಟಂಪಾಡಿ, ಪುತ್ತೂರು ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ತಲಾ ಒಂದು ಕೋಟಿ ಮ್ತತು ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿಗೆ ೨ ಕೋಟಿ ಅನುದಾನವನ್ನು ಸರಕಾರ ಬಿಡುಗಡೆ ಮಾಡಿದೆ. ಈ ಅನುದಾನದಲ್ಲಿ ಕಾಲೇಜಿನಲ್ಲಿ ಅಗತ್ಯವಾಗಿ ನಿರ್ಮಾಣವಾಗಬೇಕಾದ ಕಾಮಗಾರಿಗಳನ್ನು ಮಾಡಬಹುದಾಗಿದೆ. ಹೆಚ್ಚಾಗಿ ತರಗತಿ ಕೊಢಿ, ಶೌಚಾಲಯ ಮತ್ತು ಪ್ರಯೋಗಾಲಯದ ಕೊರತೆ ಕಾಲೇಜುಗಳಲ್ಲಿದ್ದು ಅದಕ್ಕಾಗಿ ಅನುದಾನವನ್ನು ಬಳಸಿಕೊಳ್ಳಬಹುದಾಗಿದೆ. ಕ್ಷೇತ್ರಕ್ಕೆ ಇನ್ನಷ್ಟು ಅನುದಾನಗಳು ಮುಂದಿನ ದಿನಗಳಲ್ಲಿ ಹರಿದುಬರಲಿದ್ದು ಅಭಿವೃದ್ದಿ ಕಾರ್ಯಗಳು ನಿರಂತರವಾಗಿ ನಡೆಯುತ್ತಲೇ ಇರುತ್ತದೆ.
ಅಶೋಕ್ ರೈ, ಶಾಸಕರು ಪುತ್ತೂರು