ಬೆಂಗಳೂರು: ಮನೆಯ ಹೂವಿನ ಕುಂಡದಲ್ಲಿ ಗಾಂಜಾ ಗಿಡ ಬೆಳೆದಿದ್ದ ದಂಪತಿಯನ್ನು ಸದಾಶಿವನಗರ ಪೊಲೀಸರು ಬಂಧಿಸಿ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಿದ್ದಾರೆ. ನೇಪಾಳ ಮೂಲದ ಊರ್ಮಿಳಾ ಹಾಗೂ ಗುರುಂಗ್ ಗಾಂಜಾ ಬೆಳಸಿದ್ದ ಆರೋಪಿಗಳು. ದಂಪತಿ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಂಪತಿ ಸದಾಶಿವನಗರದ ಎಮ್ಎಸ್ಆರ್ ನಗರದಲ್ಲಿ ವಾಸವಾಗಿದ್ದರು. ದಂಪತಿ ಮನೆ ಬಾಲ್ಕನಿಯಲ್ಲಿದ್ದ ಕುಂಡದಲ್ಲಿ ಗಾಂಜಾ ಗಿಡ ಬೆಳಸಿದ್ದರು. ಇತ್ತೀಚಿಗೆ ಊರ್ಮಿಳಾ ಮನೆಯ ಬಾಲ್ಕನಿಯಲ್ಲಿ ರೀಲ್ಸ್ ಮಾಡಿ ಪೋಸ್ಟ್ ಮಾಡಿದ್ದಳು. ಊರ್ಮಿಳಾ ಮಾಡಿದ್ದ ರೀಲ್ಸ್ನಲ್ಲಿ ಗಾಂಜಾ ಗಿಡ ಕಾಣಿಸಿಕೊಂಡಿದೆ. ಗಾಂಜಾ ಗಿಡ ಕುರಿತು ವ್ಯಕ್ತಿಯೋರ್ವ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಮಾಹಿತಿ ಆಧರಿಸಿ ಪರಿಶೀಲನೆ ನಡೆಸಿದಾಗ ಗಾಂಜಾ ಗಿಡ ಪತ್ತೆಯಾಗಿದೆ. 15 ವಿವಿಧ ಮಾದರಿಯ ಹೂವಿನ ಗಿಡಗಳ ಮಧ್ಯೆ ದಂಪತಿ ಗಾಂಜಾ ಗಿಡ ಬೆಳೆಸಿದ್ದರು. 54 ಗ್ರಾಂ ಗಾಂಜಾ ಸೊಪ್ಪನ್ನು ಸದಾಶಿವನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.